ADVERTISEMENT

ಕೃಷಿ ಮೇಳಕ್ಕೆ ತೆರೆ: 17 ಲಕ್ಷ ಮಂದಿ ಭೇಟಿ

ರೈತರು, ಯುವಕರು, ಕೃಷಿ ಆಸಕ್ತರ ದಂಡು: ನಾಲ್ಕು ದಿನದಲ್ಲಿ ₹4.77 ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 16:11 IST
Last Updated 16 ನವೆಂಬರ್ 2025, 16:11 IST
ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಭಾನುವಾರ ಭೇಟಿ ನೀಡಿದ್ದ ಜನಸಾಗರ
ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.
ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಭಾನುವಾರ ಭೇಟಿ ನೀಡಿದ್ದ ಜನಸಾಗರ ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಕೃಷಿಯಲ್ಲಿನ ತಾಂತ್ರಿಕತೆಯ ಅನಾವರಣ, ಹೊಸ ತಳಿಗಳು ಮತ್ತು ಆಧುನಿಕ ತಂತ್ರಜ್ಞಾನದ ಉಪಕರಣಗಳ ಪ್ರದರ್ಶನ ಒಳಗೊಂಡಿದ್ದ ಕೃಷಿ ಮೇಳಕ್ಕೆ ಭಾನುವಾರ 17.97 ಲಕ್ಷ ಜನ ಬಂದಿದ್ದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮುಖ್ಯ ಗೇಟ್‌ನಿಂದ ಕೃಷಿ ಮೇಳ ನಡೆಯುವ ಪ್ರದೇಶದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೇಳಕ್ಕೆ ನಗರವಾಸಿಗಳು, ರೈತರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. 

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಈ ಮೇಳದಲ್ಲಿ ರೈತರು, ಯುವಕರು, ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರರು ಪ್ರಾತ್ಯಕ್ಷಿಕೆ ತಾಕುಗಳು, ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಮೇಳದ ಕೊನೆಯ ದಿನವೂ ಜನಸಾಗರ ಹರಿದು ಬಂತು. ಅದರಲ್ಲೂ ರೈತರಿಗಿಂತಲೂ ನಗರದ ಜನತೆ ಕುಟುಂಬದ ಸದಸ್ಯರೊಂದಿಗೆ ಬಂದಿದ್ದರು. ಪೋಷಕರು ಮಕ್ಕಳಿಗೆ ವಿವಿಧ ಬೆಳೆಗಳನ್ನು ಪರಿಚಯಿಸಿದರು. ಸಾಂಪ್ರದಾಯಿಕ ಕೃಷಿ ಪರಿಕರಗಳನ್ನು ನಗರದ ಜನ ಕುತೂಹಲದಿಂದ ವೀಕ್ಷಿಸಿದರು. 

ಪ್ರಾಣಿ ಪ್ರಪಂಚಕ್ಕೆ ಲಗ್ಗೆ ಇಟ್ಟ ಜನ: ಮೇಳದಲ್ಲಿ ಪಶುಸಂಗೋಪನೆಗೆ ಸಂಬಂಧಿಸಿದ ಮಳಿಗೆಗಳಲ್ಲಿ ವಿವಿಧ ತಳಿಗಳ ಕುರಿ, ಕೋಳಿ ಮತ್ತು ಆಲಂಕಾರಿಕ ಮೀನು , ಹಸು, ದನ, ಎಮ್ಮೆಗಳನ್ನು ನೋಡಲು ಸಾರ್ವಜನಿಕರು ಲಗ್ಗೆ ಇಟ್ಟಿದ್ದರು.  ಹಳ್ಳಿಕಾರ್ ತಳಿ ಎತ್ತುಗಳ ಮುಂಭಾಗದಲ್ಲಿ ನಿಂತು ಸಾರ್ವಜನಿಕರು ಫೋಟೊ ತೆಗೆಸಿಕೊಂಡರು. 

ADVERTISEMENT

ಕೃಷಿ ಯಂತ್ರೋಪಕರಣಗಳ ವಿಭಾಗ, ಸಾವಯವ ಹಾಗೂ ಸಿರಿಧಾನ್ಯ ವಿಭಾಗಗಳಲ್ಲಿ ಹೆಚ್ಚು ಜನ ಕಂಡುಬಂದರು. ಸೂರ್ಯಕಾಂತಿ ತಾಕುಗಳ ಮುಂಭಾಗದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಂಡರು. ಕೃಷಿ ಪ್ರವಾಸೋದ್ಯಮದ ಮಾದರಿಯ ಬಳಿ ಮಂಡ್ಯದ ತಾಜಾ ಬೆಲ್ಲವನ್ನು ನಗರವಾಸಿಗಳು ಸವಿದರು. ಇಲ್ಲಿರುವ ಕೆರೆಯಲ್ಲಿ ಸಾರ್ವಜನಿಕರು ಮೀನು ಹಿಡಿದು ಸಂಭ್ರಮಿಸಿದರು. 

ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹೇಗೆ? ಯಾವ ಬೆಳೆ ಬೆಳೆದರೆ ಲಾಭದಾಯಕ? ರೋಗ ಹಾಗೂ ಕೀಟಗಳ ನಿವಾರಣೆಗೆ ಯಾವ ಔಷಧ ಸಿಂಪಡಿಸಬೇಕು? ಲಾಭದಾಯಕ ಕೃಷಿಗಾಗಿ ಯಾವೆಲ್ಲ ಪದ್ಧತಿ ಅನುಸರಿಸಬೇಕು? ಸಾವಯವ ಗೊಬ್ಬರ ತಯಾರಿಕೆ ಹೇಗೆ? ಕೃಷಿ ಜೊತೆಯಲ್ಲೇ ಜೇನು ಸಾಕಿದರೆ ಹಾಗೂ ಕಿರು ಅರಣ್ಯ ಸೃಷ್ಟಿಸಿದರೆ ಲಾಭವೇ? ಈ ರೀತಿಯ ನೂರಾರು ಪ್ರಶ್ನೆಗಳಿಗೆ ಕೃಷಿ ತಜ್ಞರಿಂದ ರೈತರು ಉತ್ತರ ಪಡೆಯಲು ‘ಕೃಷಿ ಮೇಳ’ ವೇದಿಕೆಯಾಯಿತು. ಕೃಷಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಉಚಿತವಾಗಿ ಸಲಹೆ ನೀಡಲು ಮೇಳದಲ್ಲಿ ‘ಕೃಷಿ ಸಲಹಾ ಕೇಂದ್ರ’ ತೆರೆಯಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಯಿತು. 

ಹಾವು ಕಡಿತದ ಕುರಿತು ಜಾಗೃತಿ: ಹಾವು ಕಡಿತದಿಂದ ದೇಶದಲ್ಲಿ 50 ಸಾವಿರದಿಂದ 60 ಸಾವಿರ ಮಂದಿ ಮೃತಪಡುತ್ತಿದ್ದಾರೆ. ಹಾವು ಕಡಿದಾಗ ಅವೈಜ್ಞಾನಿಕವಾಗಿ ಆ ಭಾಗವನ್ನು ಕತ್ತರಿಸಲಾಗುತ್ತದೆ. ಇಂತಹ ಅವೈಜ್ಞಾನಿಕ ಕ್ರಮಗಳಿಂದ ಹಲವರು ಮೃತಪಡುತ್ತಿದ್ದಾರೆ. ಮಾನವ ವನ್ಯ ಜೀವಿ ಸಂಘರ್ಷವನ್ನು ತಡೆಯುವುದು ನಮ್ಮ ಉದ್ದೇಶವಾಗಿದೆ. ಅದರ ಭಾಗವಾಗಿ  ರಾಜ್ಯದಾದ್ಯಂತ ಉಚಿತವಾಗಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ವೈಲ್ಡ್‌ ವರ್ಲ್ಡ್‌ ಕನ್ಸರ್ವೇಷನ್‌ ಟ್ರಸ್ಟ್‌ ಸಂಸ್ಥಾಪಕ ಟ್ರಸ್ಟಿ ರಾಜೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಹಳ್ಳಿಕಾರ್‌ ತಳಿಯ ಎತ್ತುಗಳ ಮುಂಭಾಗದಲ್ಲಿ ನಿಂತುಕೊಂಡು ಯುವತಿಯೊಬ್ಬರು ಫೋಟೊ ತೆಗೆಸಿಕೊಂಡರು
ಜಿಕೆವಿಕೆ ಆವರಣದಲ್ಲಿ ಭಾನುವಾರ ಸಂಚಾರ ದಟ್ಟಣೆ ಹೆಚ್ಚಿತ್ತು
ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಐಸಿಎಆರ್‌ ಉಪಮಹಾನಿರ್ದೇಶಕ ಸಂಜಯ್‌ ಕುಮಾರ್ ಸಿಂಗ್ ಅವರಿಗೆ ‘ಡಾ.ಎಂ.ಎಚ್. ಮರೀಗೌಡ ರಾಷ್ಟ್ರೀಯ ದತ್ತಿ ಅತ್ಯುತ್ತಮ ತೋಟಗಾರಿಕಾ ಸಂಶೋಧಾನ ಪ್ರಶಸ್ತಿ’ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀಡಿಗಾನಹಳ್ಳಿಯ ರೈತ ಬಿ.ಆರ್. ಮಂಜುನಾಥ ಅವರಿಗೆ ‘ಡಾ.ಎಂ.ಎಚ್. ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ’ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ರೈತ ಎಚ್.ಎಲ್. ಗೋವಿಂದಪ್ಪ ಅವರಿಗೆ ‘ಡಾ.ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ವಿಸ್ತರಣಾ ನಿರ್ದೇಶಕ ವೈ.ಎನ್. ಶಿವಲಿಂಗಯ್ಯ ಕುಲಸಚಿವ ಕೆ.ಸಿ. ನಾರಾಯಣಸ್ವಾಮಿ ಉಪಸ್ಥಿತರಿದ್ದರು 

ನಾಲ್ಕು ದಿನದ ಮೇಳಕ್ಕೆ 54 ಲಕ್ಷ ಮಂದಿ ಭೇಟಿ

‘ನಾಲ್ಕು ದಿನಗಳಲ್ಲಿ 54.16 ಲಕ್ಷ ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ. ಮೊದಲ ದಿನವಾದ ಗುರುವಾರ 8.51 ಲಕ್ಷ ಎರಡನೇ ದಿನ 11.85 ಲಕ್ಷ ಮೂರನೇ ದಿನ 15.87 ಲಕ್ಷ ಮತ್ತು ನಾಲ್ಕನೇ ದಿನವಾದ ಭಾನುವಾರ 17.93 ಲಕ್ಷ ಮಂದಿ ಮೇಳಕ್ಕೆ ಭೇಟಿ ನೀಡಿದ್ದಾರೆ. ಈ ನಾಲ್ಕು ದಿನಗಳಲ್ಲಿ ₹4.77 ಕೋಟಿ ವಹಿವಾಟು ನಡೆದಿದ್ದು ರಿಯಾಯಿತಿ ದರದಲ್ಲಿ ಒಟ್ಟು 55498 ಜನ ಭೋಜನ ಸವಿದಿದ್ದಾರೆ’ ಎಂದು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

- ಜಿಕೆವಿಕೆ ಆವರಣದ ಸುತ್ತಲೂ ಸಂಚಾರ ದಟ್ಟಣೆ

ಕೃಷಿ ಮೇಳದ ಅಂತಿಮ ದಿನವಾದ ಭಾನುವಾರ ಜಿಕೆವಿಕೆಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡುಬಂತು. ಮೇಳ ನಡೆಯುತ್ತಿದ್ದ ಪ್ರದೇಶಕ್ಕೆ ತೆರಳಲು ಸಾರ್ವಜನಿಕರು ಪರದಾಡಿದರು. ಮುಖ್ಯ ಗೇಟ್‌ನಿಂದ ಮೇಳ ನಡೆಯುವ ಪ್ರದೇಶಕ್ಕೆ ಹೋಗಲು ವಿಶ್ವವಿದ್ಯಾಲಯದ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಆದರೆ ಮೇಳಕ್ಕೆ ಲಕ್ಷಾಂತರ ಜನ ಭೇಟಿ ನೀಡಿದ್ದರು. ಬಸ್‌ಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಮಹಿಳೆಯರು ಮಕ್ಕಳು ವೃದ್ಧರು ನಡೆದುಕೊಂಡು ಸಾಗುತ್ತಿದ್ದರು. ‘ನಗರದ ಜನ ಸ್ವಂತ ವಾಹನಗಳ ಮೂಲಕ ಮೇಳಕ್ಕೆ ಬಂದಿದ್ದರು. ಇದು ಸಂಚಾರ ದಟ್ಟಣೆಗೆ ಕಾರಣವಾಯಿತು’ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.