ಕೆ.ಆರ್.ಪುರ: ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಬಳಿಯ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಮಾತನಾಡಿ, ಶಾಸಕ ಬೈರತಿ ಬಸವರಾಜ ಅವರು ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದು ಈ ಕೂಡಲೇ ರಾಜೀನಾಮೆ ನೀಡಬೇಕು. ಈ ಪ್ರಕರಣದಲ್ಲಿ ಶಾಸಕರನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದರು.
‘ಜನಸಾಮಾನ್ಯರ ಮೇಲೆ ಠಾಣೆಯಲ್ಲಿ ಎಫ್ಐಆರ್ ದಾಖಲಾದರೆ ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಶಾಸಕರ ಮೇಲೆ ಎಫ್ಐಆರ್ ದಾಖಲಾದರೂ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ‘ಹಿಂದೆ ಆಯ್ಕೆಯಾದ ಶಾಸಕರು ಕ್ಷೇತ್ರದಲ್ಲಿ ಗೌರವ ಉಳಿಸುವಂತಹ ಕೆಲಸಗಳನ್ನು ಮಾಡಿದ್ದರು. ಬೈರತಿ ಬಸವರಾಜ ಅವರು ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಶಾಂತಿ ಇಲ್ಲದಂತಾಗಿದೆ’ ಎಂದು ಆರೋಪಿಸಿದರು.
ಈ ಸಂಧರ್ಭದಲ್ಲಿ ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ನಂದಕುಮಾರ್, ಮುಖಂಡರಾದ ಎಂ.ನಾರಾಯಣಸ್ವಾಮಿ, ಡಿ.ಎ.ಗೋಪಾಲ್, ಡಿ.ಕೆ.ದೇವೇಂದ್ರ, ಕಲ್ಕೆರೆ ನಾರಾಯಣಸ್ವಾಮಿ, ಬಂಡೆ ರಾಜು, ಜಯರಾಮ್, ಮೇಡಹಳ್ಳಿ ರಾಕಿ, ಅಗರ ಪ್ರಕಾಶ್, ಗಗನ್ ಯಾದವ್, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.