ADVERTISEMENT

ಸಾರಿಗೆ ಬಸ್‌ ಮುಷ್ಕರ ಅನಿಶ್ಚಿತ; ಮುಷ್ಕರ ನಡೆಸದಂತೆ ಹೈಕೋರ್ಟ್‌ ನಿರ್ದೇಶನ

* ತೀರ್ಮಾನದಲ್ಲಿ ಸದ್ಯ ಬದಲಾವಣೆ ಇಲ್ಲ ಎಂದ ಸಂಘಟನೆಗಳು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 21:58 IST
Last Updated 4 ಆಗಸ್ಟ್ 2025, 21:58 IST
<div class="paragraphs"><p>ಸಾರಿಗೆ ಮುಷ್ಕರ </p></div>

ಸಾರಿಗೆ ಮುಷ್ಕರ

   

ಬೆಂಗಳೂರು: ಸಾರಿಗೆ ನೌಕರರ ಸಂಘಟನೆಗಳ ಜತೆ ಮುಖ್ಯಮಂತ್ರಿ ನಡೆಸಿದ ಮನವೊಲಿಕೆ ಪ್ರಯತ್ನ ವಿಫಲ, ಒಂದು ದಿನದ ಮಟ್ಟಿಗೆ ಮುಷ್ಕರಕ್ಕೆ ತಡೆ ನೀಡಿ ಹೈಕೋರ್ಟ್ ಆದೇಶ, ಇದರ ಮಧ್ಯೆಯೇ ನೌಕರರ ಸಂಘಟನೆಗಳ ಅಸ್ಪಷ್ಟ ನಿಲುವು ಮುಂದುವರಿದಿದೆ. ಹೀಗಾಗಿ, ಸರ್ಕಾರಿ ಬಸ್ಸುಗಳು ಮಂಗಳವಾರ (ಆ.5) ರಸ್ತೆಗಿಳಿಯಲಿವೆಯೇ ಎಂಬ ಗೊಂದಲಕ್ಕೆ ಸೋಮವಾರ ತಡ ರಾತ್ರಿಯವರೆಗೂ ತೆರೆ ಬಿದ್ದಿರಲಿಲ್ಲ.

ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಂಧಾನ ಫಲ ಕೊಡಲಿಲ್ಲ. ಬಸ್‌ ಮುಷ್ಕರ ನಡೆಯಲಿದೆ ಎಂದು ಕ್ರಿಯಾ ಸಮಿತಿ ಘೋಷಿಸಿದೆ. 

ADVERTISEMENT

‘ಹೈಕೋರ್ಟ್‌ನ ಆದೇಶ ನಮ್ಮ ಕೈಸೇರಿಲ್ಲ. ಮುಷ್ಕರ ನಡೆದೇ ನಡೆಯುತ್ತದೆ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಎಚ್‌.ವಿ. ಅನಂತ ಸುಬ್ಬರಾವ್‌ ಸೋಮವಾರ ರಾತ್ರಿವರೆಗೂ ಹೇಳುತ್ತಾ ಬಂದಿದ್ದರು. ಹೈಕೋರ್ಟ್‌ನ ಆದೇಶದ ಪ್ರತಿ ಅವರ ಕೈ ಸೇರಿದ ಬಳಿಕವೂ ನಿರ್ಧಾರವನ್ನು ತಕ್ಷಣಕ್ಕೆ ಬದಲಾಯಿಸಲು ಸಾರಿಗೆ ನೌಕರರ ಸಂಘಟನೆಗಳು ಒಪ್ಪಿಲ್ಲ.

‘ರಾತ್ರಿ 7.45ಕ್ಕೆ ಹೈಕೋರ್ಟ್‌ನ ಆದೇಶದ ಪ್ರತಿ ಸಿಕ್ಕಿದೆ. ಆರೇಳು ಸಂಘಟನೆಗಳಿರುವ ಜಂಟಿ ಸಮಿತಿ ಮುಷ್ಕರ ನಡೆಸಲು ನಿರ್ಧರಿಸಿದೆ. ಎಲ್ಲ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿಯೇ ಮುಷ್ಕರದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಸದ್ಯ ಬಹುತೇಕರು ಅವರ ಮನೆಗಳಿಗೆ ತೆರಳಿದ್ದು, ಸಮಾಲೋಚನೆ ನಡೆಸಲು ಸಾಧ್ಯವಾಗಿಲ್ಲ. ಈ ಆದೇಶದ ಬಗ್ಗೆ ಕಾನೂನು ಸಲಹೆಗಾರರೊಂದಿಗೂ ಚರ್ಚಿಸಲಾಗುತ್ತಿದೆ. ಅವರ ಅಭಿಪ್ರಾಯ, ಜಂಟಿ ಸಮಿತಿಯ ಅಭಿಪ್ರಾಯಗಳನ್ನೆಲ್ಲ ತೆಗೆದುಕೊಂಡು ಮಂಗಳವಾರ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಮುಷ್ಕರದ ನಿರ್ಧಾರ ಮುಂದುವರಿಯಲಿದೆ’ ಎಂದು ಫೆಡರೇಷನ್‌ ಕಾರ್ಯದರ್ಶಿ ವಿಜಯಭಾಸ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಭಾಗವಹಿಸದಂತೆ ಮನವಿ: ‘ಕಾರ್ಮಿಕ ಸಂಘಟನೆಗಳು ಆ.5ರಂದು ನಡೆಸಲು ಉದ್ದೇಶಿಸಿರುವ ಮುಷ್ಕರಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಆದೇಶವನ್ನು ಎಲ್ಲರೂ ಗೌರವಿಸಬೇಕು. ಮುಖ್ಯಮಂತ್ರಿಯವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಾರ್ವಜನಿಕ ಸೇವಾ ಸಂಸ್ಥೆಯಾಗಿರುವ ಸಾರಿಗೆ ನಿಗಮಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಬಾರದು’ ಎಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ.

ಆ.6ಕ್ಕೆ ಮುಷ್ಕರ?

ಆಗಸ್ಟ್‌ 6ರ ಬುಧವಾರ ಮುಷ್ಕರ ನಡೆಯುವ ಬಗ್ಗೆ ಸಾರಿಗೆ ಇಲಾಖೆಗೆ ಸುಳಿವು ಸಿಕ್ಕಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಇಲಾಖೆ ಮುಂದಾಗಿದೆ.

ಖಾಸಗಿ ಬಸ್‌ ಅಸೊಸಿಯೇಶನ್‌ಗಳೊಂದಿಗೆ ಚರ್ಚೆ ನಡೆಸಿರುವ ಇಲಾಖೆಯು ಬಸ್‌ಗಳನ್ನು ಒದಗಿಸಲು ಕೋರಿಕೊಂಡಿದೆ.

‘11 ಸಾವಿರ ಬಸ್‌ಗಳನ್ನು ಆ.6ರಂದು ಒದಗಿಸಲು ಅಧಿಕಾರಿಗಳು ಕೇಳಿದ್ದಾರೆ. ಅದರಂತೆ ನಾವು ಬಸ್‌ಗಳನ್ನು ಒದಗಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.