ADVERTISEMENT

ಕೆಎಸ್‌ಆರ್‌ಟಿಸಿಯ ಚಾಲಕ ಕಂ ನಿರ್ವಾಹಕ: 545 ಅಭ್ಯರ್ಥಿಗಳಿಗಿಲ್ಲ ನೇಮಕಾತಿ ಆದೇಶ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 15:45 IST
Last Updated 14 ಅಕ್ಟೋಬರ್ 2025, 15:45 IST
ಕೆಎಸ್‌ಆರ್‌ಟಿಸಿ ಬಸ್
ಕೆಎಸ್‌ಆರ್‌ಟಿಸಿ ಬಸ್   

ಬೆಂಗಳೂರು: ‘ಕೆಎಸ್‌ಆರ್‌ಟಿಸಿಯ ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ 545 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೇ ವಿಳಂಬ ನೀತಿ ಅನುಸರಿಸಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಆರೋಪಿಸಿದೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಆರ್. ಜಗದೀಶ್, ‘ಕೆಎಸ್ಆರ್‌ಟಿಸಿಗೆ 2020ರಲ್ಲಿ 2,545 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದರಲ್ಲಿ 2,000 ಸಾವಿರ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಿ, ಘಟಕಗಳಿಗೆ ನಿಯೋಜನೆ ಮಾಡಲಾಗಿದೆ. ಉಳಿದ 545 ಅಭ್ಯರ್ಥಿಗಳಿಗೆ ಆದೇಶಪತ್ರ ನೀಡುತ್ತಿಲ್ಲ. ಆಯ್ಕೆಯಾದ ಅಭ್ಯರ್ಥಿಗಳ ವಯೋಮಿತಿ ಹೆಚ್ಚಾಗುತ್ತಿದ್ದು, ಅಂತಹವರನ್ನು ಆಯ್ಕೆ ಪಟ್ಟಿಯಿಂದ ಹೊರಗಿಡುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೆಎಸ್ಆರ್‌ಟಿಸಿಯ ಚಾಲಕ ಕಂ ನಿರ್ವಾಹಕ ಹುದ್ದೆಗೆ ಆಯ್ಕೆ ಆಗಿರುವ ಕಾರಣ ಬೇರೆ ಕೆಲಸಗಳಿಗೆ ಹೋಗಲು ಆಗುತ್ತಿಲ್ಲ. ಕೆಲಸ ಸಿಕ್ಕರೂ ನೇಮಕಾತಿ ಆದೇಶ ಸಿಗದೇ ನಿರುದ್ಯೋಗಿಗಳಾಗಿದ್ದೇವೆ. ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

ADVERTISEMENT