ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಅಮಾನತು ಆಗಿರುವ ಕೆಎಸ್‌ಆರ್‌ಟಿಸಿ ಲೆಕ್ಕಪತ್ರ ವಿಭಾಗದ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ರಿಚರ್ಡ್ ಜೆ. ವಿರುದ್ಧ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್‌ಆರ್‌ಟಿಸಿ ಸಿಬ್ಬಂದಿ ವರ್ಗಾವಣೆಗಾಗಿ ಮತ್ತು ವಜಾಗೊಂಡ ನೌಕರನ ಪುನರ್ ನೇಮಕಕ್ಕಾಗಿ ರಿಚರ್ಡ್ ನಕಲಿ ದಾಖಲೆ ಸೃಷ್ಟಿಸಿರುವುದು ಪತ್ತೆಯಾಗಿದ್ದರಿಂದ ಜುಲೈ 24ರಂದು ಕೆಎಸ್‌ಆರ್‌ಟಿಸಿ ಶಿಸ್ತುಪಾಲನಾಧಿಕಾರಿ ಅಮಾನತು ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಭದ್ರತೆ ಮತ್ತು ಜಾಗೃತ ಅಧಿಕಾರಿ ಕೆ.ಎನ್. ಲಕ್ಷ್ಮಣ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನು ಆಧರಿಸಿ, ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶಿವಮೊಗ್ಗ ಘಟಕದಲ್ಲಿ ಸಹಾಯಕ ಕುಶಲಕರ್ಮಿಯಾಗಿರುವ ಎನ್.ಎ. ನಾಗರಾಜಪ್ಪ ಅವರನ್ನು ದಾವಣಗೆರೆಗೆ ವರ್ಗಾಯಿಸಲು, ವಜಾಗೊಂಡಿರುವ ಚಾಲಕ ನಾಗರಾಜ ಎನ್.ಎ. ಅವರ ಪುನರ್ ನೇಮಕ ಮತ್ತು ಕುಂದಾಪುರ ಘಟಕದಲ್ಲಿ ಚಾಲಕರಾಗಿರುವ ಚಂದ್ರಹಾಸ ಎಸ್. ಆಚಾರಿ ಅವರನ್ನು ಶಿವಮೊಗ್ಗಕ್ಕೆ ವರ್ಗಾಯಿಸಲು ನಕಲಿ ವರ್ಗಾವಣೆ ಮತ್ತು ಪುನರ್ ನೇಮಕಾತಿ ಆದೇಶಗಳನ್ನು ರಿಚರ್ಡ್ ಸೃಷ್ಟಿಸಿದ್ದರು. ಸಂಬಂಧಪಟ್ಟ ವಿಭಾಗಗಳ ಮುಖ್ಯಸ್ಥರಾದ ಮುಖ್ಯ ಯಾಂತ್ರಿಕ ಎಂಜಿನಿಯರ್, ಮುಖ್ಯ ಸಂಚಾರ ವ್ಯವಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಹಿಗಳನ್ನು ಸ್ಕ್ಯಾನ್ ಮಾಡಿ ನಕಲಿ ಆದೇಶಗಳಿಗೆ ಲಗತ್ತಿಸಿ ಮುದ್ರಿಸಿ ಮೂವರಿಗೆ ಕಳುಹಿಸಿಕೊಟ್ಟಿದ್ದರು. ಅಧಿಕಾರಿಗಳ ಸಹಿ ದುರುಪಯೋಗ ಪಡಿಸಿಕೊಂಡು ವಂಚಿಸಿರುವ ರಿಚರ್ಡ್ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.