ADVERTISEMENT

ಬಜ್ಜಿ, ಬೋಂಡ ಮಾರಾಟ ಮಾಡಿದ ಸಾರಿಗೆ ನೌಕರರು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:37 IST
Last Updated 2 ಏಪ್ರಿಲ್ 2021, 19:37 IST
ಮೆಜೆಸ್ಟಿಕ್ ನಿಲ್ದಾಣದಲ್ಲಿ ಬಜ್ಜಿ, ಬೋಂಡ ತಯಾರಿಸಿದ ಕೋಡಿಹಳ್ಳಿ ಚಂದ್ರಶೇಖರ್
ಮೆಜೆಸ್ಟಿಕ್ ನಿಲ್ದಾಣದಲ್ಲಿ ಬಜ್ಜಿ, ಬೋಂಡ ತಯಾರಿಸಿದ ಕೋಡಿಹಳ್ಳಿ ಚಂದ್ರಶೇಖರ್   

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ಭಾಗವಾಗಿ ದಿನಕ್ಕೊಂದು ಬಗೆಯ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ಸಂಸ್ಥೆಗಳ ನೌಕರರು, ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಶುಕ್ರವಾರ ಬಜ್ಜಿ, ಬೋಂಡ, ವಡೆ, ಕಾಫಿ, ಟೀ ತಯಾರಿಸಿ ಮಾರಾಟ ಮಾಡಿದರು.

ಆರು ದಿನಗಳ ಕಾಲ ವಿಭಿನ್ನ ಚಳವಳಿ ನಡೆಸಲು ನಿರ್ಧರಿಸಿರುವ ನೌಕರರು, ಗುರುವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ್ದರು. ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಮೈಸೂರು ರಸ್ತೆಯ ಸ್ಯಾಟಿಲೈಟ್ ಬಸ್ ನಿಲ್ದಾಣ, ಕೆಂಗೇರಿ ಬಸ್ ನಿಲ್ದಾಣ, ಡಿಪೋಗಳು, ಪ್ರಾದೇಶಿಕ ಕಾರ್ಯಾಗಾರಗಳು, ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಸಣ್ಣ ಸಣ್ಣ ಕ್ಯಾಂಟೀನ್‌ಗಳನ್ನು ತೆರೆದು ಗಮನ ಸೆಳೆದರು.

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಜ್ಜಿ-ಬೋಂಡಾ ತಯಾರಿಸಿ ಮಾರಾಟ ಮಾಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ಸಾಂಕೇತಿಕವಾಗಿ ಸರ್ಕಾರದ ಗಮನ ಸೆಳೆಯಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸರ್ಕಾರ 40 ವರ್ಷಗಳಿಂದ ಸಾರಿಗೆ ನೌಕರರಿಗೆ ಮೋಸ ಮಾಡಿದೆ. ಸಾರಿಗೆ ನೌಕರರನ್ನು ಅರೆ ಹೊಟ್ಟೆ ಜೀವನಕ್ಕೆ ನೂಕಿದೆ. ಈಗಲಾದರೂ ನೌಕರರಿಗೆ ಸೂಕ್ತ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಡಿಸೆಂಬರ್‌ನಲ್ಲಿ ನಡೆಸಿದ ಮುಷ್ಕರದ ವೇಳೆ ಸರ್ಕಾರ ನೀಡಿದ್ದ ಭರವಸೆಯ ಈಡೇರಿಸದೆ ಮಾತು ತಪ್ಪಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತು ಉಳಿಸಿಕೊಳ್ಳಬೇಕು. ಇನ್ನೂ ನಾಲ್ಕು ದಿನ ವಿಭಿನ್ನ ಪ್ರತಿಭಟನೆ ನಡೆಯಲಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಏ.7ರಂದು ಸಾರಿಗೆ ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು’ ಎಂದು ಹೇಳಿದರು.

ಮಾನವ ಸರಪಳಿ ಚಳವಳಿ ಇಂದು

‘ವಿಭಿನ್ನ ಚಳವಳಿಯ ಭಾಗವಾಗಿ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಪ್ರಮುಖ ವೃತ್ತಗಳಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಭಿತ್ತಿಪತ್ರ ಪ್ರದರ್ಶಿಸಲಿದ್ದಾರೆ’ ಎಂದು ನೌಕರರ ಕೂಟ ತಿಳಿಸಿದೆ.

ಏ.4 ರಂದು ಕರಪತ್ರ ಹಂಚಿಕೆ, ಟ್ವಿಟರ್ ಮತ್ತು ಫೇಸ್‌ಬುಕ್ ಅಭಿಯಾನ, ಏ.5ರಂದು ಡಿಪೋಗಳಲ್ಲಿ ಧರಣಿ, ಏ.6ರಂದು ನೌಕರರು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.