
ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಶ್ರೀ ಲೇಔಟ್‌ನ ಶೆಡ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣದ ಅಪರಾಧಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಆಜೀವ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ, ಆದೇಶಿಸಿದೆ.
ಜಾರ್ಖಂಡ್ ರಾಜ್ಯದ ಬಾರ್ಕೆಲ್ ಗ್ರಾಮದ ಒಡೆಯ ಬೋಯಿಪೈ ಅಲಿಯಾಸ್ ಸಂಜಯ್ (35) ಶಿಕ್ಷೆಗೆ ಗುರಿಯಾದ ಅಪರಾಧಿ. ಹನುಮಂತರಾಜು ಅವರನ್ನು ಅಪರಾಧಿ ಕೊಲೆ ಮಾಡಿದ್ದ. ಕುಂಬಳಗೋಡಿನ ನಿವಾಸಿ ಬಸವರಾಜು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಬೋಯಿಪೈ ಹಾಗೂ ಹನುಮಂತರಾಜು ಶೆಡ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದರು. ಹನುಮಂತರಾಜು ಅವರು ದೊಣ್ಣೆಯಿಂದ ಅಪರಾಧಿ ಬೋಯಿಪೈ ಮೇಲೆ ಹಲ್ಲೆ ನಡೆಸಿದ್ದರು. ಅದೇ ದೊಣ್ಣೆಯನ್ನು ಬೋಯಿಪೈ ಕಸಿದುಕೊಂಡು ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹನುಮಂತರಾಜು ಅವರು ಮೃತಪಟ್ಟಿದ್ದರು.
ಇನ್‌ಸ್ಪೆಕ್ಟರ್ ಆರ್.ವಿಜಯಕುಮಾರ್ ಅವರ ನೇತೃತ್ವದ ತಂಡವು ತನಿಖೆ ನಡೆಸಿ, ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬೋಯಿಪೈ ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ, ಪ್ರಕರಣವು ಆರನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಅಲ್ಲಿ ವಾದ–ಪ್ರತಿವಾದ ನಡೆದು, ಅಪರಾಧಿಗೆ ಆಜೀವ ಜೈಲು ಶಿಕ್ಷೆ ₹15 ಸಾವಿರ ದಂಡ ಹಾಗೂ ದಂಡ ಪಾವತಿಸಲು ಸಾಧ್ಯ ಆಗದಿದ್ದರೆ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯವು ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.