ADVERTISEMENT

ಆಗಸ್ಟ್‌ 17, 18ಕ್ಕೆ ಬೆಂಗಳೂರಿನಲ್ಲಿ ಕುಂದಾಪ್ರ ಕನ್ನಡ ಹಬ್ಬ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 15:22 IST
Last Updated 15 ಜುಲೈ 2024, 15:22 IST
   

ಬೆಂಗಳೂರು: ಐದನೇ ‘ವಿಶ್ವ ಕುಂದಾಪ್ರ ಕನ್ನಡ ದಿನ’ವನ್ನು ಆಗಸ್ಟ್‌ 17 ಮತ್ತು 18ರಂದು ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದೆ.

ಈ ಹಿಂದೆ ನಾಲ್ಕು ‘ಕುಂದಾಪ್ರ ಕನ್ನಡ ಹಬ್ಬ’ಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಅತಿ ಹೆಚ್ಚು ಜನರು ಭಾಗವಹಿಸಿದ್ದರಿಂದ ಈ ಬಾರಿ ಇನ್ನಷ್ಟು ಜನರಿಗೆ ಅವಕಾಶ ಮಾಡಿಕೊಡಲು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದರು.

‘ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು’ ಸಂಘಟನೆಯ ‘ವಾಲ್ಗ’ (ಪೂರ್ವಭಾವಿ) ಕಾರ್ಯಕ್ರಮದಲ್ಲಿ ರೂಪುರೇಷೆ ತಯಾರಿಸಲಾಗಿದೆ. ಎರಡು ದಿನದ ಈ ಕಾರ್ಯಕ್ರಮ ‘ದಿಬ್ಣ’ದೊಂದಿಗೆ (ಮೆರವಣಿಗೆ) ಆರಂಭವಾಗಲಿದೆ. ನಗರದ ಕನಿಷ್ಠ 10 ಕಡೆಗಳಿಂದ ಮೆರವಣಿಗೆ ಸಾಗಿ ಬರಲಿದೆ. ‘ನಾಕ್ ಘನಾ ಸುರ್ಲ್’ ಎಂಬ ಕರಾವಳಿಯ ಗೀತೆಗಳ ಗಾಯನವಿರಲಿದೆ. ‘ನುಡಿ ಚಾವಡಿ’ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಅ.17ರ ರಾತ್ರಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ‘ಜೋಡಾಟ’ ನಡೆಯಲಿದೆ. ಯಕ್ಷರಂಗದ ಮೇರು ಕಲಾವಿದರು ಭಾಗವಹಿಸಲಿದ್ದಾರೆ. ಕನ್ನಡ ಚಿತ್ರರಂಗದ ನಿರ್ದೇಶಕರು, ತಾರೆಯರು ಮೆರುಗು ಹೆಚ್ಚಿಸಲಿದ್ದಾರೆ ಎಂದು ವಿವರಿಸಿದರು.

ADVERTISEMENT

ಸಂಗೀತ ನಿರ್ದೇಶಕ ರವಿ ಬಸ್ರೂರು, ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯಕುಮಾರ್ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥಾಪಕ ನಿರ್ದೇಶಕ ಆರ್. ಉಪೇಂದ್ರ ಶೆಟ್ಟಿ, ಹೋಟೆಲ್‌ ಉದ್ಯಮಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.