ADVERTISEMENT

ಕುಂದಾಪ್ರ ಕನ್ನಡ ಅಧ್ಯಯನ ಪೀಠ ಲೋಕಾರ್ಪಣೆ

ಹಬ್ಬದಲ್ಲಿ ಕುಂದಾಪ್ರ ಭಾಷೆಯ ಸೊಗಡು, ಆಚರಣೆ, ಸಂಸ್ಕೃತಿ ಆನಾವರಣ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 0:16 IST
Last Updated 27 ಜುಲೈ 2025, 0:16 IST
ಬೆಂಗಳೂರಿನಲ್ಲಿ ಶನಿವಾರ ಕುಂದಾಪ್ರ ಕನ್ನಡ ಪ್ರತಿಷ್ಠಾನ ಆಯೋಜಿಸಿದ್ದ "ಕುಂದಾಪ್ರ ಕನ್ನಡ ಹಬ್ಬ" ಕಾರ್ಯಕ್ರಮದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಹುಲಿವೇಷದಲ್ಲಿ ಗಮನ ಸೆಳೆದರು -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶನಿವಾರ ಕುಂದಾಪ್ರ ಕನ್ನಡ ಪ್ರತಿಷ್ಠಾನ ಆಯೋಜಿಸಿದ್ದ "ಕುಂದಾಪ್ರ ಕನ್ನಡ ಹಬ್ಬ" ಕಾರ್ಯಕ್ರಮದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಹುಲಿವೇಷದಲ್ಲಿ ಗಮನ ಸೆಳೆದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬದುಕಿನ ಪಥದಲಿ ಭಾಷೆಯ ರಥ’ ಘೋಷವಾಕ್ಯ ಇಟ್ಟುಕೊಂಡು ಶನಿವಾರ ಆರಂಭಗೊಂಡ ‘ಕುಂದಾಪ್ರ’ ಕನ್ನಡ ಹಬ್ಬದಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಲೋಕಾರ್ಪಣೆಗೊಂಡಿತು. ಪ್ರಾದೇಶಿಕ ಭಾಷೆಯ ಸೊಗಡು, ಸೊಬಗು, ಸಂಸ್ಕೃತಿ, ಸಂಪ್ರದಾಯ, ಊಟೋಪಚಾರ, ಆಚರಣೆಗಳು ಹಬ್ಬದಲ್ಲಿ ಅನಾವರಣಗೊಂಡವು.

ಅಧ್ಯಯನ ಪೀಠದ ಸದಸ್ಯ ಕೆ. ಜಯಪ್ರಕಾಶ್‌ ಹೆಗ್ಡೆ ಪೀಠ ಲೋಕಾರ್ಪಣೆ ಮಾಡಿ ಮಾತನಾಡಿ,‘ಕುಂದಾಪ್ರ (ಕುಂದಾಪುರ) ಕನ್ನಡ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸುವ ಮೂಲಕ ಅಧ್ಯಯನ ಪೀಠವನ್ನು ಬಲಗೊಳಿಸಬೇಕು’ ಎಂದು ತಿಳಿಸಿದರು.

ನಾಲ್ಕು ವರ್ಷಗಳ ಹಿಂದೆ ಕುಂದಾಪ್ರ ಕನ್ನಡ ಹಬ್ಬದಲ್ಲಿ ಈ ಅಧ್ಯಯನ ಪೀಠಕ್ಕೆ ಬೇಡಿಕೆ ಇಡಲಾಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾತ್ರವಲ್ಲದೆ ಸರ್ಕಾರದಿಂದಲೂ ಒ‍ಪ್ಪಿಗೆ ಸಿಕ್ಕಿತಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 1.5 ಕೋಟಿ ಮಂಜೂರು ಮಾಡಿದರು ಎಂದು ನೆನಪಿಸಿಕೊಂಡರು.

ADVERTISEMENT

ಕುಂದಾಪ್ರ ಕನ್ನಡ ಬಗ್ಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ಒಂದು ಆ್ಯಪ್ ರೂಪಿಸಿದ್ದು, ಪಂಜು ಗಂಗೊಳ್ಳಿ ಅವರು ಕುಂದಗನ್ನಡ ನಿಘಂಟು ಮಾಡಿದ್ದಾರೆ. ಅದೇ ರೀತಿ ಯಾವುದೇ ಮಹತ್ವದ ವಸ್ತು–ವಿಷಯ ಇದ್ದರೆ ಪೀಠಕ್ಕೆ ನೀಡಿ ಎಂದು ಮನವಿ ಮಾಡಿದರು.

ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಮಾತನಾಡಿ, ‘ಕುಂದಗನ್ನಡವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಈ ಪೀಠ ನೆರವಾಗಲಿದೆ. ಕುಂದಾಪ್ರ ಕನ್ನಡ ಹಬ್ಬದಿಂದ ಕುಂದಾಪುರ ಮಾತ್ರವಲ್ಲದೆ ಬೆಂಗಳೂರು, ದುಬೈ ಸೇರಿ ವಿಶ್ವದೆಲ್ಲೆಡೆ‌ ಕುಂದಾಪ್ರ ಹೆಸರು ಅನುರಣಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕುಂದಾಪುರದಲ್ಲಿ ಕುಂದಾಪುರ ಕನ್ನಡ ಭವನ ನಿರ್ಮಿಸುವ ಚಿಂತನೆ ಇದೆ’ ಎಂದು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದರು.

ಮಣಿಪಾಲ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ.ಎಚ್. ಸುದರ್ಶನ ಬಲ್ಲಾಳ್ ಅವರಿಗೆ ‘ಊರ ಗೌರವ’ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ರಾಜು ಮೊಗವೀರ, ಲೈಫ್‌ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜೊತೆ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಉಪಸ್ಥಿತರಿದ್ದರು.

ಮಣಿಪಾಲ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ.ಎಚ್. ಸುದರ್ಶನ ಬಲ್ಲಾಳ್ ಅವರಿಗೆ ‘ಊರ ಗೌರವ’ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಪ್ರಮುಖ ಅಂಶಗಳು

* ರವಿ ಬಸ್ರೂರು ರೂಪಿಸಿರುವ ಕುಂದಗನ್ನಡದ ಸುಮಾರು 9 ಸಾವಿರ ಪದಗಳನ್ನು ಒಳಗೊಂಡ 'ಡಿಜಿಟಲ್ ಶಬ್ದಕೋಶ' ಎಂಬ ಆ್ಯಪ್ ಬಿಡುಗಡೆ ಮಾಡಲಾಯಿತು.

* ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಭಾನುವಾರ ‘ಊರ ಗೌರವ’ ವಿಶೇಷ ಪುರಸ್ಕಾರ ನೆರವೇರಲಿದೆ.

* ಭಾನುವಾರ ಪಿಳ್ಳಂಗೋವಿಯ ಚೆಲುವ ಕೃಷ್ಣನಾ: ಗಾನಯಾನ ಬಾಲಗೋಪಾಲ: ಯಕ್ಷನೃತ್ಯ ಮನು ಹಂದಾಡಿಯ ಹಂದಾಡಿ ಕ್ವಿಜ್ ಫ್ಯಾಷನ್ ಶೋ ‘ಚಂದಾಮುಡಿ’ ಕಾಳಿಂಗ ನಾವಡ ಮತ್ತು ಪಿ.ಕಾಳಿಂಗರಾಯರ ಪದ-ಪದ್ಯಗಳ ಅನುರಣನ ರಘು ದೀಕ್ಷಿತ್ ಲೈವ್ ಕನ್ಸರ್ಟ್ ವಿಶೇಷ ಅಭಿನಂದನೆ ಕಾರ್ಯಕ್ರಮಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.