ADVERTISEMENT

ಪ್ರತ್ಯೇಕತೆ ಕೂಗಿನ ಹಿಂದೆ ಸ್ವಾರ್ಥವಿದೆ: ಕುಪೇಂದ್ರ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 19:17 IST
Last Updated 5 ಆಗಸ್ಟ್ 2018, 19:17 IST
ಕೆಂಪೇಗೌಡರ ಜಯಂತ್ಯುತ್ಸವವನ್ನು ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿದರು
ಕೆಂಪೇಗೌಡರ ಜಯಂತ್ಯುತ್ಸವವನ್ನು ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿದರು   

ಬೆಂಗಳೂರು: ರಾಜಕೀಯ ಸ್ವಾರ್ಥಕ್ಕಾಗಿ ರಾಜ್ಯವನ್ನುಇಬ್ಭಾಗ ಮಾಡಲು ಪ್ರಯತ್ನಿಸುವುದು ಸರಿಯಲ್ಲ ಎಂದು ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ ಹೇಳಿದರು.

ಭಾನುವಾರ ಬೇಗೂರಿನಲ್ಲಿ ಬೇಗೂರು ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವು ಮೂಲಭೂತವಾದಿಗಳು ಅಧಿಕಾರದಾಹದಿಂದ ಪ್ರತ್ಯೇಕ ರಾಜ್ಯದ ಪ್ರಸ್ತಾಪ ಮಾಡುತ್ತಿದ್ದಾರೆ. ಇದರಲ್ಲಿ ಅಭಿವೃದ್ಧಿಯ ಕಾಳಜಿ ಎಂಬುದು ನೆಪ ಮಾತ್ರ. ಜನತೆ ಇಂತಹ ಕೂಗಿಗೆ ಕಿವಿಗೊಡಬಾರದು’ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ‘ನಾಡಪ್ರಭು ಕೆಂಪೇಗೌಡರು ನಾಡಿನ ಹಿತಕ್ಕಾಗಿ ಕೆರೆ ಕಟ್ಟೆ, ಉದ್ಯಾನ, ಮಾರುಕಟ್ಟೆ ನಿರ್ಮಾಣದಂತಹ ಕಾರ್ಯಗಳನ್ನು ಕೈಗೊಂಡಿದ್ದರು. ಅವರ ದೂರದೃಷ್ಟಿ ಇಂದಿನವರಿಗೆ ಇಲ್ಲದಿರುವುದು ವಿಷಾದನೀಯ’ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಕ್ಕಲಿಗ ಸಮುದಾಯದ ಹಿರಿಯರಿಗೆ ಬೇಗೂರು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂಜಾವಧೂತ ಸ್ವಾಮಿಜಿ, ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಒಕ್ಕಲಿಗರ ಜಾಗೃತಿ ಸಂಘದ ರಾಜ್ಯಾಧ್ಯಕ್ಷ ಮುನಿರಾಜ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.