ADVERTISEMENT

ಕುರುಬರನ್ನು ಎಸ್‌.ಟಿ. ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಆಗ್ರಹ: ಕುರುಬರ ಸಮಾಜ ಸಂಘ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 14:07 IST
Last Updated 9 ಅಕ್ಟೋಬರ್ 2025, 14:07 IST
   

ಬೆಂಗಳೂರು: ‘ರಾಜ್ಯದ ಎಲ್ಲ ಕುರುಬರನ್ನು ಕೂಡಲೇ ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಪಟ್ಟಿಗೆ ಸೇರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು’ ಎಂದು ಕರ್ನಾಟಕ ಕುರುಬರ (ಕುರುಮನ್ಸ್) ಸಮಾಜ ಸಂಘಆಗ್ರಹಿಸಿದೆ. 

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕುರುಬರ ಮುಕುಡಪ್ಪ, ‘ಎಸ್‌.ಟಿ. ಪಟ್ಟಿಗೆ ಕುರುಬರ ಸೇರ್ಪಡೆಗೆ ಸಂಬಂಧಿಸಿದಂತೆ, 2020ರ ಸೆಪ್ಟೆಂಬರ್‌ನಲ್ಲಿ ಕಾಗಿನೆಲೆ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಆಗ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರನ್ನು ಒಳಗೊಂಡ ನಿಯೋಗ ನವದೆಹಲಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಸಂಬಂಧ ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವೆ ರೇಣುಕಾ ಸಿಂಗ್‌, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಲಾಗಿತ್ತು. ರಾಜ್ಯದಲ್ಲಿ ಎಸ್‌.ಟಿ. ಪಟ್ಟಿಗೆ ಸೇರ್ಪಡೆಯಾಗುವ ಅರ್ಹತೆಯನ್ನು ಕುರುಬರು ಹೊಂದಿದ್ದಾರೆ’ ಎಂದು ಹೇಳಿದರು. 

‘ವಾಲ್ಮೀಕಿ ಜನಾಂಗಕ್ಕಿಂತ ಮೊದಲೇ ಎಸ್‌.ಟಿ.ಗೆ ಸೇರುವ ಅರ್ಹತೆ ಹೊಂದಿದ್ದರೂ ಸೇರದಿರುವುದು ದುರಂತ. ಈಗ ಹೋರಾಟ ಅನಿವಾರ್ಯವಾಗಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕುರುಬರನ್ನು ಎಸ್‌.ಟಿ. ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲ ಮಾಹಿತಿಗಳನ್ನು ಕಳೆದ ತಿಂಗಳು ಕೇಳಿದೆ. ರಾಜ್ಯ ಸರ್ಕಾರವು ಎಲ್ಲ ಕುರುಬರನ್ನು ಎಸ್‌.ಟಿ. ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಅಗತ್ಯ ಮಾಹಿತಿ ನೀಡಬೇಕು’ ಎಂದರು. 

ADVERTISEMENT

‘ಕುರುಬರು ದೇಶದ ಮೂಲ ನಿವಾಸಿಗಳು. ಜೇನು ಕುರುಬ, ಕಾಡು ಕುರುಬ, ಸೋಲಿಗ, ಇಳುವರ, ಕೊಡಗಿನ ಕುರುಬರು ಪರಿಶಿಷ್ಟ ಪಂಗಡದಲ್ಲಿ ಮೊದಲೇ ಇದ್ದರು. ಅವರು ಎಸ್‌.ಟಿ.ಯಲ್ಲಿ ಪಡೆಯುತ್ತಿದ್ದ ಸೌಲಭ್ಯವನ್ನು ಕಿತ್ತುಕೊಂಡವರು ವಾಲ್ಮೀಕಿ ಜನಾಂಗದವರು’ ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಸಂತೋಷ ಗೌಡಪ್ಪನವರ, ವಸಂತ ಬಿಷ್ಟಣ್ಣನವರ್, ಬಿ. ದಯಾನಂದ ಮೂರ್ತಿ, ಶಿವಪ್ಪ ಪೂಜಾರಿ, ಎನ್. ಮಂಜುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.