ADVERTISEMENT

ಕುರುಬರ ಸಂಘದಲ್ಲಿ ಅವ್ಯವಹಾರ ಆರೋಪ: 29ಕ್ಕೆ ಪ್ರತಿಭಟನೆ

29ಕ್ಕೆ ನಿರ್ದೇಶಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:31 IST
Last Updated 25 ಮಾರ್ಚ್ 2022, 19:31 IST

ಬೆಂಗಳೂರು: ‘ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿಯಿಂದ ಭಾರಿ ಅವ್ಯವಹಾರ ಮತ್ತು ಅಕ್ರಮ ನಡೆದಿದೆ. ಇದನ್ನು ಖಂಡಿಸಿ ಸಂಘದ ಚುನಾಯಿತ ನಿರ್ದೇಶಕರಿಂದ ಮಾ.29ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ನಿರ್ದೇಶಕ ಟಿ.ಬಿ.ಬಳಗಾವಿ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘವು ಶತಮಾನ ಪೂರೈಸಿದೆ. ಸರ್ಕಾರದಲ್ಲಿ ಮೂರು ಮಂದಿ ಪ್ರಭಾವಿ ಮಂತ್ರಿಗಳಿದ್ದರೂ ಆಡಳಿತ ಮಂಡಳಿಯವರು ಸಮಾಜದ ಅಭಿವೃದ್ಧಿ ಮಾಡದೆ, ರಾಜಕೀಯ ಮುಖಂಡರ ಚೇಲಾಗಳಾಗಿ ವೈಯಕ್ತಿಕ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.

‘ಗಾಂಧಿನಗರದಲ್ಲಿರುವ ಸಂಘದ ಕಟ್ಟಡ ಮತ್ತು ಶ್ರೀನಿವಾಸನಗರ ಆಸ್ತಿಗೆ 2008ರಿಂದ ಈವರೆಗೆ ಸುಮಾರು ₹2.50 ಕೋಟಿ ಕಂದಾಯ ಪಾವತಿ ಬಾಕಿ ಉಳಿಸಿಕೊಂಡು, ಹರಾಜಿನ ದುಸ್ಥಿತಿಗೆ ತಂದಿದ್ದಾರೆ. ಬಿಡಿಎ ವತಿಯಿಂದ ಶ್ರೀನಿವಾಸನಗರದಲ್ಲಿ ಮಂಜೂರಾಗಿದ್ದ ಸಿ.ಎ.ನಿವೇಶನ ಪ್ರಸ್ತುತ ಸಂಘದ ಆಸ್ತಿಯಾಗಿ ಉಳಿದಿಲ್ಲ’ ಎಂದರು.

ADVERTISEMENT

‘3 ವರ್ಷಗಳಿಂದ ಸರ್ವ ಸದಸ್ಯರ ಸಭೆ ಕರೆದಿಲ್ಲ. ಕಟ್ಟಡ ಬಾಡಿಗೆ ವಸೂಲಿ ಬಗ್ಗೆ ಹಾಗೂ ಕರಾರು ಪತ್ರಗಳ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.ಸದಸ್ಯತ್ವದಿಂದ ಬಂದ ಹಣವನ್ನು ಜಿಲ್ಲಾ ಸಂಘಗಳಿಗೆ ಬೈಲಾ ಪ್ರಕಾರ ವಿತರಿಸದೆ, ಇಷ್ಟಾನುಸಾರ ಹಂಚಿಕೆ ಮಾಡಿದ್ದಾರೆ. ಅವ್ಯವಹಾರಗಳ ಬಗ್ಗೆ ಮಾಹಿತಿ ಕೋರಿದ ಸದಸ್ಯರನ್ನು ನಿಯಮಬಾಹಿರವಾಗಿ ಅಮಾನತು ಮಾಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಬನಶಂಕರಿಯ ಕಲ್ಯಾಣ ಮಂಟಪದ ಹಣಕಾಸಿನ ಖರ್ಚುವೆಚ್ಚದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಸಂಘದ ಅಧ್ಯಕ್ಷರು ಬೆದರಿಕೆ ಹಾಕಿದರು’ ಎಂದು ಅವರು ಆರೋಪಿಸಿದರು.

‘ಸಂಘದ ಹಾಸ್ಟೆಲ್‌ಗಳಲ್ಲಿ ಕನಿಷ್ಠ ಸೌಕರ್ಯಗಳನ್ನು ಒದಗಿಸಿಲ್ಲ. ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನಿಲ್ಲಿಸಿದ್ದಾರೆ. ಹಳೆಯ ಬೈಲಾ ತಿದ್ದುಪಡಿಗೆ ಈವರೆಗೆ ಮುಂದಾಗಿಲ್ಲ. ಕನಕ ಭವನದಿಂದ ಬಂದ ಬಾಡಿಗೆಯನ್ನು ಸಂಘದ ಖಜಾಂಚಿ ಮತ್ತು ಪ್ರಧಾನ ಕಾರ್ಯದರ್ಶಿ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.