ADVERTISEMENT

ಕುಸುಮ್ ಸಿ | 2,400 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಗುರಿ: ಇಂಧನ ಸಚಿವ ಜಾರ್ಜ್

ಉಪ ಕೇಂದ್ರದ ಬಳಿ ವಿದ್ಯುತ್‌ ಸೌರ ಘಟಕ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 16:29 IST
Last Updated 9 ಜೂನ್ 2025, 16:29 IST
ಕೆ.ಜೆ. ಜಾರ್ಜ್‌
ಕೆ.ಜೆ. ಜಾರ್ಜ್‌   

ಬೆಂಗಳೂರು: ‘ವಿದ್ಯುತ್‌ ಫೀಡರ್‌ಗಳ ಬಳಿ ಸೌರವಿದ್ಯುತ್ ಉತ್ಪಾದಿಸಿ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುವ ‘ಕುಸುಮ್ ಸಿ’ ಯೋಜನೆಯಡಿ ಮೊದಲ ಹಂತದಲ್ಲಿ ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ 2400 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶದಿಂದ ಪ್ರತಿ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ‘ಕುಸುಮ್ ಸಿ’ ಯೋಜನೆಯಡಿ ಸೌರವಿದ್ಯುತ್ ಘಟಕ ಸ್ಥಾ‍ಪಿಸಲಾಗುತ್ತಿದೆ. ಈ ಘಟಕದಿಂದ ಫೀಡರ್‌ಗಳ ಮೂಲಕ ಆಯಾ ಉಪಕೇಂದ್ರದ ವ್ಯಾಪ್ತಿಯಲ್ಲಿರುವ ಪಂಪ್‌ಸೆಟ್‌ಗಳಿಗೆ ಪೂರೈಸಲಾಗುವುದು. ಇದರಿಂದ ಗುಣಮಟ್ಟದ ವಿದ್ಯುತ್ ಲಭ್ಯವಾಗುತ್ತದೆ. ಪರಿವರ್ತಕಗಳ ಮೇಲಿನ ಹೊರೆಯೂ ತಗ್ಗುತ್ತದೆ ಎಂದು ವಿವರಿಸಿದರು.

ಮೊದಲ ಹಂತದಲ್ಲಿ ಈ ಯೋಜನೆಯಿಂದ ಸುಮಾರು 6.19 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸುವ‌ ನಿಟ್ಟಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ಸುಮಾರು 200 ಮೆಗಾವಾಟ್‌ ಸಾಮರ್ಥ್ಯದ ಸೌರ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೆಲವೇ ತಿಂಗಳುಗಳಲ್ಲಿ 93 ಸ್ಥಳಗಳಲ್ಲಿ 545 ಮೆಗಾವಾಟ್‌ ಸಾಮರ್ಥ್ಯದ ಸೌರ ಘಟಕಗಳು ಚಾಲನೆಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು. 

ADVERTISEMENT

‘ಕುಸುಮ್ ಸಿ’ ಯೋಜನೆಯಡಿ 1 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆಗೆ ಸುಮಾರು ₹4 ಕೋಟಿ ವೆಚ್ಚವಾಗುತ್ತದೆ. ಈ ಪೈಕಿ ₹1 ಕೋಟಿ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಬರುತ್ತದೆ. ಉಳಿದ ಹಣ ಖಾಸಗಿ ಕಂಪನಿಗಳು ಬಂಡವಾಳ ಹೂಡುತ್ತವೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ಯೂನಿಟ್ ವಿದ್ಯುತ್‌ಗೆ ಗರಿಷ್ಠ ₹3.17 ನಿಗದಿಪಡಿಸಿದೆ’ ಎಂದರು.

‘ತಾಂತ್ರಿಕ ಸಾಧ್ಯತೆ ಇರುವ ವಿದ್ಯುತ್ ಉಪ ಕೇಂದ್ರಗಳ ಬಳಿ ಸೌರ ಘಟಕಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ರಾಜ್ಯದಲ್ಲಿ 1400 ವಿದ್ಯುತ್ ಉಪಕೇಂದ್ರಗಳಿವೆ. ಸದ್ಯ 400 ಉಪಕೇಂದ್ರಗಳಲ್ಲಿ ಮಾತ್ರ ಕುಸುಮ್ ಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಖಾಸಗಿಯವರು ಸೌರ ಘಟಕಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸುತ್ತಾರೆ. ಅದನ್ನು ಸರ್ಕಾರ ಖರೀದಿಸಿ ಆಯಾ ಫೀಡರ್‌ಗಳ ವ್ಯಾಪ್ತಿಯ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸುತ್ತದೆ’ ಎಂದು ವಿವರಿಸಿದರು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌. ಶಿವಶಂಕರ್ , ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್) ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್‌.ಜೆ.ರಮೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

‘ಕುಸುಮ್ ಸಿ’ ಉದ್ಘಾಟನೆ ನಾಳೆ

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ಜೂನ್ 11 ಬೆಳಿಗ್ಗೆ 10 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಸುಮ್-ಸಿ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

‘ಕೇಂದ್ರ ಇಂಧನ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಖಾತೆ ಸಚಿವ ಶ್ರೀಪಾದ್‌ ನಾಯಕ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರಾದ ಕೃಷ್ಣ ಬೈರೇಗೌಡ ಡಾ.ಎಂ.ಸಿ.ಸುಧಾಕರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ‘ ಎಂದರು.

‘ಗೌರಿಬಿದನೂರು ತಾಲ್ಲೂಕಿನ‌ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿ ಮತ್ತು ಚರಕಮಟ್ಟೇನಹಳ್ಳಿ ಗ್ರಾಮದ ಸುಮಾರು 60 ಎಕರೆ ಪ್ರದೇಶದಲ್ಲಿ 20 ಮೆ.ವಾ. ಸಾಮರ್ಥ್ಯದ ಸೋಲಾರ್ ಘಟಕ ಸ್ಥಾಪಿಸಲಾಗಿದೆ. ಸದ್ಯ ರಾಜ್ಯದಲ್ಲಿ ಕುಸುಮ್-ಸಿ ಯೋಜನೆಯಡಿ ಸ್ಥಾಪಿಸಲಾಗಿರುವ ಅತಿ ದೊಡ್ಡ ಘಟಕವಿದು. ಹೀಗಾಗಿ ಗೌರಿಬಿದನೂರಿನಲ್ಲಿ ಯೋಜನೆಯನ್ನು ಉದ್ಘಾಟಿಸಲು ನಿರ್ಧರಿಸಲಾಗಿದೆ. ಇಲ್ಲಿ ಖಾಸಗಿ ಜಮೀನನ್ನು 25 ವರ್ಷಕ್ಕೆ ಭೋಗ್ಯಕ್ಕೆ ಪಡೆಯಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.