ADVERTISEMENT

ಮತೀಯ ಶಕ್ತಿ ನಿಗ್ರಹಿಸದಿದ್ದರೆ ದೇಶಕ್ಕೆ ಅಪಾಯ: ಎಲ್‌.ಹನುಮಂತಯ್ಯ ಆತಂಕ

ಸಿಪಿಐ ಶತಮಾನೋತ್ಸವ ಸಮಾರೋಪ: ರಾಜ್ಯಸಭೆಯ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಆತಂಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 15:39 IST
Last Updated 23 ಡಿಸೆಂಬರ್ 2025, 15:39 IST
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಿಪಿಐ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಉಮಾ, ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್‌, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಪ್ರಕಾಶ್ ಬಾಬು, ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಸಿಪಿಐ ಮುಖಂಡ ದೀಪಕ್ ಎಂ., ಸಿಪಿಐ ನಾಯಕ ಸಿದ್ಧನಗೌಡ ಪಾಟೀಲ ಭಾಗವಹಿಸಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಿಪಿಐ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಉಮಾ, ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್‌, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಪ್ರಕಾಶ್ ಬಾಬು, ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಸಿಪಿಐ ಮುಖಂಡ ದೀಪಕ್ ಎಂ., ಸಿಪಿಐ ನಾಯಕ ಸಿದ್ಧನಗೌಡ ಪಾಟೀಲ ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರ   

‌‌

ಬೆಂಗಳೂರು: ‘ದೇಶದಲ್ಲಿ ಮತೀಯ ಶಕ್ತಿಗಳು ಪ್ರಬಲವಾಗಿ ಬೆಳೆದಿದ್ದು ಜಾತ್ಯತೀತ ಪರಿಕಲ್ಪನೆಗೆ ಧಕ್ಕೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸಮಾನ ಮನಸ್ಕ ಪಕ್ಷಗಳ ಜತೆಯಲ್ಲಿ ಸಂಘಟನೆಗಳು ಒಗ್ಗಟ್ಟಾಗದೇ ಇದ್ದರೆ ದೇಶದ ಭವಿಷ್ಯಕ್ಕೆ ಧಕ್ಕೆಯಾಗಬಹುದು’ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಆತಂಕ ವ್ಯಕ್ತಪಡಿಸಿದರು.

ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಿಪಿಐ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್‌ ಮಾತ್ರವಲ್ಲದೇ ಕಮ್ಯುನಿಸ್ಟರು, ದಲಿತ, ರೈತ ಚಳವಳಿಗಳ ಸಂಗಾತಿಗಳು, ಪ್ರಾದೇಶಿಕ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಧ್ರುವೀಕರಣಕ್ಕೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು. 

ADVERTISEMENT

ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಪ್ರಕಾಶ್‌ ಬಾಬು ಮಾತನಾಡಿ, ‘ಬಿಜೆಪಿಯು ಅಧಿಕಾರ ಬಳಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ಲೂಟಿ ಹೊಡೆಯುತ್ತಿದೆ. ಬಿಜೆಪಿ ಆಸ್ತಿಯೇ ₹7000 ಕೋಟಿಯಷ್ಟಿದೆ. ಕಾಂಗ್ರೆಸ್‌ ಕೆಲವು ಕ್ಷೇತ್ರಗಳಲ್ಲಿ ಖಾಸಗೀಕರಣ ತಂದರೆ, ಬಿಜೆಪಿ ಅದನ್ನು ಮುಂದುವರಿಸಿದೆ. ಬಡವರ ಬಲ ಹೆಚ್ಚಿಸಿದ್ದ ನರೇಗಾ ಹೆಸರು, ನಿಯಮ ಬದಲಿಸಿ, ಅದರ ಆಶಯವನ್ನೇ ಹಾಳು ಮಾಡಿದೆ’ ಎಂದು ಟೀಕಿಸಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್‌ ಮಾತನಾಡಿ, ‘ಆರ್‌ಎಸ್‌ಎಸ್‌, ಡಿಜಿಟಲ್‌ ಮಾಧ್ಯಮವನ್ನು ಬಳಸಿಕೊಂಡು ಜನರಲ್ಲಿ ತನ್ನ ವಿಚಾರಗಳನ್ನು ಬಿತ್ತುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ 2020ಕ್ಕೆ ತಿದ್ದುಪಡಿ ತರಲು ಸಿದ್ದರಾಮಯ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಭೂಸ್ವಾಧೀನ ನೀತಿಯ ಮೂಲಕ ಜನರನ್ನು ಹೆದರಿಸಲಾಗುತ್ತಿದೆ’ ಎಂದರು.

ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ‌ಉಮಾ ಮಾತನಾಡಿ, ‘ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್‌ ಮ್ಯಾಗ್ನೆಟ್‌ ಶಾಲೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ.  ಹೊಸ ಕೆಪಿಎಸ್‌ ಶಾಲೆ ಆರಂಭಿಸುವ ಬದಲು ಈಗಿರುವ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿ ಮಕ್ಕಳು ಬರುವ ಹಾಗೆ ಮಾಡಿ’ ಎಂದು ಹೇಳಿದರು.

ಸಿಪಿಐ ಮುಖಂಡ ಎಂ.ದೀಪಕ್‌ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂಎಲ್‌) ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್‌ ಡಿ.ರೊಜಾರಿಯೊ, ಫಾರ್ವಡ್‌ ಬ್ಲಾಕ್‌ ರಾಜ್ಯ ಕಾರ್ಯದರ್ಶಿ ಜಿ.ಆರ್‌.ಶಿವಶಂಕರ, ಮುಖಂಡ ಪಿ.ವಿ.ಲೋಕೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಸಮತಾ ರಾಜ್ಯದ ಕನಸುಗಳೊಂದಿಗೆ ಪಕ್ಷದ ಶತಮಾನೋತ್ಸವ ಆರಂಭಗೊಂಡಿತ್ತು. ಇದರ ಭಾಗವಾಗಿ ಒಂದು ತಿಂಗಳ ಕಾಲ ಕರ್ನಾಟಕದಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಲಾಗಿದೆ.
ಸಾತಿ ಸುಂದರೇಶ ಸಿಪಿಐ ರಾಜ್ಯ ಕಾರ್ಯದರ್ಶಿ
‘ಕರ್ನಾಟಕ ರಾಜಕಾರಣದ ಮುಂದಿನ ಹೆಜ್ಜೆಗಳ ಕುರಿತು ಕಮ್ಯುನಿಸ್ಟ್‌ ಪಕ್ಷದ ನಾಲ್ಕು ವಿಭಿನ್ನ ಪಕ್ಷಗಳು ಶೀಘ್ರವೇ ಒಂದೆಡೆ ಕುಳಿತು ಚರ್ಚಿಸಿ ಮುಂದಿನ ರೂಪು ರೇಷೆ ರೂಪಿಸಿಕೊಳ್ಳಕು
ಸಿದ್ದನಗೌಡ ಪಾಟೀಲ ಸಿಪಿಐ ನಾಯಕ