ADVERTISEMENT

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ದೇಹ, ಅಂಗಾಂಗ ದಾನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 16:14 IST
Last Updated 29 ಜನವರಿ 2026, 16:14 IST
ಸಿದ್ದರಾಮಯ್ಯ ಅವರು ಎಚ್.ವಿ. ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಕುಟುಂಬದ ಸದಸ್ಯರು, ಕಮ್ಯುನಿಸ್ಟ್‌ ಮುಖಂಡರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಅವರು ಎಚ್.ವಿ. ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಕುಟುಂಬದ ಸದಸ್ಯರು, ಕಮ್ಯುನಿಸ್ಟ್‌ ಮುಖಂಡರು ಉಪಸ್ಥಿತರಿದ್ದರು.   

ಬೆಂಗಳೂರು: ಬುಧವಾರ ನಿಧನರಾದ ಕಾರ್ಮಿಕ ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌ ಅವರ ದೇಹ ಮತ್ತು ಅಂಗಾಂಗಗಳನ್ನು ದಾನ ಮಾಡಲಾಯಿತು.

ಕಣ್ಣು ಮತ್ತು ಮಿದುಳು ದಾನವು ತಡವಾದರೆ ಉಪಯೋಗಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಬುಧವಾರ ರಾತ್ರಿಯೇ ಕಣ್ಣುಗಳನ್ನು ಲಯನ್ಸ್‌ ಕಣ್ಣಿನ ಆಸ್ಪತ್ರೆಗೆ, ಮಿದುಳನ್ನು ನಿಮ್ಹಾನ್ಸ್‌ಗೆ ನೀಡಲಾಯಿತು. ಬಳಿಕ ವೈದ್ಯರು ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. 

ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ವೈಯಾಲಿ ಕಾವಲ್‌ನಲ್ಲಿರುವ ಸಿಪಿಐ ಕಚೇರಿ ‘ಘಾಟೆ ಭವನ’ದಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಬಳಿಕ ದೇಹವನ್ನು ನಿಮ್ಹಾನ್ಸ್‌ಗೆ ಹಸ್ತಾಂತರಿಸಲಾಯಿತು.

ADVERTISEMENT

ಹಲವರಿಂದ ದರ್ಶನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಶಾಸಕರಾದ ಪ್ರಿಯಕೃಷ್ಣ, ಎನ್‌.ಎಚ್. ಕೋನರೆಡ್ಡಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ವಕೀಲ ಚಂದ್ರಮೌಳಿ, ಸಾರಿಗೆ ನಿಗಮಗಳ ಅಧಿಕಾರಿಗಳು, ನೌಕರರು, ಕಮ್ಯುನಿಸ್ಟ್‌ ಪಕ್ಷದ ಮುಖಂಡರು ಅಂತಿಮ ದರ್ಶನ ಪಡೆದರು.

‘ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆ ಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಬದ್ಧತೆಯ ಕಮ್ಯುನಿಸ್ಟ್‌ ನಾಯಕರಾಗಿದ್ದರು. ‘ನಾನು ಸಾರಿಗೆ ಸಚಿವನಾಗಿದ್ದ ಕಾಲದಿಂದಲೂ ಅವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದೆ. ಕಾರ್ಮಿಕರ ಧ್ವನಿಯಾಗಿ ಹಲವು ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ಕೆಎಸ್‌ಆರ್‌ಟಿಸಿ ನೌಕರರ ಪ್ರತಿನಿಧಿಯಾಗಿ ತಿಂಗಳ ಹಿಂದೆಯಷ್ಟೇ ನನ್ನನ್ನು ಭೇಟಿ ಮಾಡಿದ್ದರು. ಬದ್ಧತೆಯ, ಜಾತ್ಯತೀತ ನಾಯಕರಾಗಿದ್ದ ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವುಂಟಾಗಿದೆ’ ಎಂದು ಸಿದ್ದರಾಮಯ್ಯ ನುಡಿನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.