ADVERTISEMENT

ಪ್ರಯೋಗಾಲಯಗಳ ಸಂಖ್ಯೆ 60ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2020, 18:57 IST
Last Updated 27 ಮೇ 2020, 18:57 IST
   

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪ್ರಯೋಗಾಲಯಗಳ ಸಂಖ್ಯೆಯನ್ನು 60ಕ್ಕೆ ಏರಿಕೆ ಮಾಡಲಾಗಿದೆ.

ಸದ್ಯ ಸರ್ಕಾರಿ ಹಾಗೂ ಖಾಸಗಿ ಸೇರಿ 59 ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ.ಮೇ ತಿಂಗಳ ಅಂತ್ಯಕ್ಕೆ ಪ್ರಯೋಗಾಲಯಗಳ ಸಂಖ್ಯೆಯನ್ನು 60ಕ್ಕೆ ಏರಿಕೆ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಎನ್‌ಐವಿ) ಬುಧವಾರ ಇನ್ನೊಂದು ಪ್ರಯೋಗಾಲಯ ಆರಂಭಿಸಲು ಅನುಮತಿ ನೀಡಿದೆ.ಪ್ರಯೋಗಾಲಯಗಳ ಸಂಖ್ಯೆ ಏರಿದಂತೆ ಕೋವಿಡ್ ಪರೀಕ್ಷೆಗಳೂಹೆಚ್ಚಳವಾಗಿದ್ದು, ಪರೀಕ್ಷಾ ಸಾಮರ್ಥ್ಯ 13 ಸಾವಿರಕ್ಕೆ ತಲುಪಿದೆ.

‘ಫೆ. 1ರಂದು ಬೆಂಗಳೂರಿನ ಎನ್‌ಐವಿ ವಿಭಾಗದಲ್ಲಿ ಮೊದಲ ಪ್ರಯೋಗಾಲಯವನ್ನು ಪ್ರಾರಂಭಿಸಲಾಗಿತ್ತು. ಫೆಬ್ರವರಿ ಅಂತ್ಯಕ್ಕೆ ರಾಜ್ಯದಲ್ಲಿ ಕೇವಲ ಎರಡು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದವು. ಮಾರ್ಚ್ ಅಂತ್ಯಕ್ಕೆ ಈ ಸಂಖ್ಯೆ 6ಕ್ಕೆ ತಲುಪಿತು. ಏಪ್ರಿಲ್ ಅಂತ್ಯಕ್ಕೆ 17ಕ್ಕೆ ಏರಿಕೆ ಮಾಡಲಾಗಿತ್ತು. ಈಗ 60 ಪ್ರಯೋಗಾಲಯಗಳನ್ನು ಹೊಂದಿದ್ದೇವೆ’ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ADVERTISEMENT

‘ಮಾರ್ಚ್‌ ತಿಂಗಳಲ್ಲಿ 2,308 ಗಂಟಲ ಮಾದರಿಗಳನ್ನು ಮಾತ್ರ ಪರೀಕ್ಷೆ ಮಾಡಲಾಗಿತ್ತು. ಏಪ್ರಿಲ್ ತಿಂಗಳಲ್ಲಿ 55,034 ಮಾದರಿಗಳ ಪರೀಕ್ಷೆ ನಡೆದಿದೆ. ಮೇ ತಿಂಗಳಲ್ಲಿ ಈವರೆಗೆ 1,79,397 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.