ADVERTISEMENT

ಕಾರ್ಮಿಕರಿಗೆ ಸಂಸತ್‌, ಕೋರ್ಟ್‌ಗಳಲ್ಲೂ ಸಿಗುತ್ತಿಲ್ಲ ನ್ಯಾಯ: ನ್ಯಾ. ಗೋಪಾಲಗೌಡ

ಹೋರಾಟವೊಂದೇ ದಾರಿ: ಕಾರ್ಮಿಕರ ಸಮಾವೇಶದಲ್ಲಿ ನ್ಯಾ. ಗೋಪಾಲಗೌಡ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 15:48 IST
Last Updated 1 ಫೆಬ್ರುವರಿ 2026, 15:48 IST
ಎಐಸಿಸಿಟಿಯು ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಸಮಾವೇಶದಲ್ಲಿ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿದರು.
ಪ್ರಜಾವಾಣಿ ಚಿತ್ರ
ಎಐಸಿಸಿಟಿಯು ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಸಮಾವೇಶದಲ್ಲಿ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾರ್ಮಿಕರಿಗೆ ಸಂಸತ್ತಿನಲ್ಲಿ,ಕೋರ್ಟ್‌ಗಳಲ್ಲಿ ನ್ಯಾಯ ಸಿಗುತ್ತಿಲ್ಲ. ನ್ಯಾಯ ಪಡೆಯಲು ಹೋರಾಟವೊಂದೇ ದಾರಿ’ ಎಂದು ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅಭಿಪ್ರಾಯಪಟ್ಟರು.

ಫೆ.12ರಂದು ನಡೆಯುವ ಸಾರ್ವತ್ರಿಕ ಮುಷ್ಕರದ ಭಾಗವಾಗಿ, ‘ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು’ ಒತ್ತಾಯಿಸಿ ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ (ಎಐಸಿಸಿಟಿಯು) ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶದ ಅಭಿವೃದ್ಧಿಗೆ, ಪ್ರಗತಿಗೆ ಟ್ರೇಡ್‌ ಯೂನಿಯನ್‌ಗಳೇ ಅಡ್ಡಿಯಾಗಿವೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹೇಳುತ್ತಾರೆ ಎಂದರೆ ಕಾರ್ಮಿಕರು ಎಲ್ಲಿ ನ್ಯಾಯ ಕೇಳಬೇಕು? ಕಾರ್ಮಿಕರ ಹಕ್ಕುಗಳ ಬಗ್ಗೆ ಗೊತ್ತಿಲ್ಲದವರಷ್ಟೇ ಈ ರೀತಿ ಹೇಳಲು ಸಾಧ್ಯ’ ಎಂದು ಟೀಕಿಸಿದರು.

ADVERTISEMENT

‘ಕಾರ್ಮಿಕರು ಇಲ್ಲದೇ ಸುಪ್ರೀಂಕೋರ್ಟ್ ನಡೆಯಲು ಸಾಧ್ಯವೇ? ಅಲ್ಲಿ ಕಸ ಗುಡಿಸುವವರು, ಕಡತಗಳನ್ನು ತಂದು ಕೊಡುವವರು, ಕಂಪ್ಯೂಟರ್‌ ಆಪರೇಟರ್‌ಗಳು ಕೆಲಸ ಮಾಡದೇ ಇದ್ದರೆ ನೀವು ಹೇಗೆ ನ್ಯಾಯ ನೀಡುವಿರಿ? ಅವರೆಲ್ಲ ಕಾರ್ಮಿಕರು. ಅವರಿಗೆ ಕನಿಷ್ಠ ವೇತನ ಇರಬೇಕು ಎಂಬ ಪ್ರಜ್ಞೆ ನಿಮಗಿಲ್ಲವೇ’ ಎಂದು ಪ್ರಶ್ನಿಸಿದರು.

ಕಾರ್ಮಿಕರ 29 ಕಾಯ್ದೆಗಳಿದ್ದವು. ಇವು ಪೂರ್ಣವಾಗಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿದ್ದವು ಎಂದಲ್ಲ. ಆದರೂ ಪರವಾಗಿರಲಿಲ್ಲ. ಯಾವಾಗಲೂ ಹಳೇ ಕಾಯ್ದೆಗಳನ್ನು ರದ್ದು ಪಡಿಸಿ ಹೊಸ ಕಾಯ್ದೆ ತರುವಾಗ ಇಲ್ಲವೇ ಕಾಯ್ದೆಯನ್ನು ತಿದ್ದುಪಡಿ ಮಾಡುವಾಗ ಆ ಕಾಯ್ದೆಗಿಂತ ಹೆಚ್ಚು ಹಕ್ಕುಗಳು, ಸೌಲಭ್ಯಗಳು ಇರುವಂತೆ ರೂಪಿಸಬೇಕು. ಇಲ್ಲದೇ ಇದ್ದರೆ ಹಳೇ ಕಾಯ್ದೆಯನ್ನೇ ಮುಂದುವರಿಸಬೇಕು. ಆದರೆ, ಕಾರ್ಮಿಕರ ಹಳೇ ಕಾಯ್ದೆಗಳನ್ನು ರದ್ದು ಮಾಡಿ ಹೊಸ ನಾಲ್ಕು ಸಂಹಿತೆಗಳನ್ನು ರಚಿಸಿರುವ ಕೇಂದ್ರ ಸರ್ಕಾರವು ಕಾರ್ಮಿಕರ ಎಲ್ಲ ಹಕ್ಕುಗಳನ್ನು ಕಿತ್ತುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾರ್ಮಿಕ ಸಂಹಿತೆಗಳು: ಮೋದಿ ಕಟ್ಟುತ್ತಿರುವ ಸುಳ್ಳುಗಳ ಅನಾವರಣ’ ಎಂಬ ಕೃತಿಯನ್ನು ಇದೇ ಸಂದರ್ಭದಲ್ಲಿ ಜನಾರ್ಪಣೆಗೊಳಿಸಲಾಯಿತು. ಎಐಸಿಸಿಟಿಯು ಮುಖಂಡರಾದ ಅಪ್ಪಣ್ಣ, ಕ್ರಿಫ್ಟನ್‌ ರೊಜಾರಿಯೊ, ಮೈತ್ರಿ ಕೃಷ್ಣನ್‌, ಶಂಕರ್‌, ನಿರ್ಮಲ ಸಹಿತ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.