ADVERTISEMENT

ಗೋಡೆ ಕುಸಿದು ಕಾರ್ಮಿಕ ಸಾವು: ಬಿಬಿಎಂಪಿ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 20:48 IST
Last Updated 8 ಜನವರಿ 2023, 20:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬನ್ನೇರುಘಟ್ಟ ಮುಖ್ಯರಸ್ತೆಯ ಚಿನ್ನಯ್ಯನಪಾಳ್ಯದಲ್ಲಿ ಮನೋಕಾಮನ್ ಸೆರಾಮಿಕ್ಸ್ ಇಂಕ್ ಗೋದಾಮು ಕಾಂಪೌಂಡ್ ಗೋಡೆ ಕುಸಿದು ಕಾರ್ಮಿಕ ಅಯ್ಯಪ್ಪ ಎಂಬುವರು ಮೃತಪಟ್ಟಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಲಬುರಗಿ ಜಿಲ್ಲೆಯ ಭೀಮನಹಳ್ಳಿಯ ಅಯ್ಯಪ್ಪ, ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ನಾಗರಬಾವಿಯಲ್ಲಿ ಪತ್ನಿ ಜೊತೆ ವಾಸವಿದ್ದರು. ಜ. 6ರಂದು ಕೆಲಸ ಮಾಡುತ್ತಿದ್ದ ವೇಳೆ ಕಾಂಪೌಂಡ್ ಗೋಡೆ ಕುಸಿದು ಅಯ್ಯಪ್ಪ ಮೃತಪಟ್ಟಿದ್ದಾರೆ. ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಮಲ್ಲಿಕಾರ್ಜುನ್ ಹಾಗೂ ಶರಣಪ್ಪ ಎಂಬುವರೂ ತೀವ್ರ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಅಯ್ಯಪ್ಪ ಅವರ ಪತ್ನಿ ದೂರು ನೀಡಿದ್ದಾರೆ. ಕೆಲಸದ ಸ್ಥಳದಲ್ಲಿ ನಿರ್ಲಕ್ಷ್ಯ ಆರೋಪದಡಿ ಬಿಬಿಎಂಪಿ ಗುತ್ತಿಗೆದಾರ ಚಂದ್ರು, ಸಹಾಯಕ ಗುರುಪ್ರಸಾದ್, ಜಾಗದ ಮಾಲೀಕ ಹಾಗೂ ಜಾಗ ಬಾಡಿಗೆ ಪಡೆದಿದ್ದವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

‘ಚರಂಡಿಯಲ್ಲಿ ಕಲ್ಲು ತೆಗೆದು ಸ್ವಚ್ಛಗೊಳಿಸಿದರೆ, ಗೋಡೆ ಕುಸಿದು ಬೀಳುವ ಸಂಭವವಿರುವುದಾಗಿ ಕಾರ್ಮಿಕರು ಗುತ್ತಿಗೆದಾರನಿಗೆ ಹೇಳಿದ್ದರು. ಅಷ್ಟಾದರೂ ಆತ, ಚರಂಡಿ ಸ್ವಚ್ಛ ಮಾಡಲು ಕಾರ್ಮಿಕರ ಮೇಲೆ ಒತ್ತಡ ಹೇರಿದ್ದ. ಹೀಗಾಗಿ, ಅಯ್ಯಪ್ಪ ಹಾಗೂ ಇತರರು ಚರಂಡಿ ಸ್ವಚ್ಛತೆಯಲ್ಲಿ ತೊಡಗಿದ್ದರು. ಇದೇ ಸಂದರ್ಭದಲ್ಲೇ ಗೋಡೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿತ್ತು. ತೀವ್ರ ಗಾಯಗೊಂಡು ಅಯ್ಯಪ್ಪ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.