ADVERTISEMENT

ಬಾಗಿಲು ತೆರೆಯದ ವಸತಿ ಕೇಂದ್ರ

ವಲಸಿಗರಿಗೆ ಆಶ್ರಯ: 203 ಕಟ್ಟಡ ವಶಕ್ಕೆ ಪಡೆದು ಕಾರ್ಮಿಕ ಇಲಾಖೆಗೆ ನೀಡಿದ್ದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 21:17 IST
Last Updated 7 ಏಪ್ರಿಲ್ 2020, 21:17 IST
ಪಶ್ಚಿಮ ಕಾರ್ಡ್ ರಸ್ತೆಯ ಕಲ್ಯಾಣ ಮಂಟಪವೊಂದು ಬಂದ್ ಆಗಿದ್ದು, ಅದರ ಎದುರು ವ್ಯಕ್ತಿಯೊಬ್ಬ ಮಲಗಿರುವುದು
ಪಶ್ಚಿಮ ಕಾರ್ಡ್ ರಸ್ತೆಯ ಕಲ್ಯಾಣ ಮಂಟಪವೊಂದು ಬಂದ್ ಆಗಿದ್ದು, ಅದರ ಎದುರು ವ್ಯಕ್ತಿಯೊಬ್ಬ ಮಲಗಿರುವುದು   

ಬೆಂಗಳೂರು: ನಿತ್ಯದ ದುಡಿಮೆ ನಂಬಿಬದುಕುತ್ತಿದ್ದ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ವಸತಿ ಹಾಗೂ ಊಟ ಇಲ್ಲದೇ ಪರಿತಪಿಸುತ್ತಿದ್ದಾರೆ. ಇಂಥವರಿಗೆ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ ಕಲ್ಪಿಸಲು ವಶಕ್ಕೆ ಪಡೆದಿರುವ ಕಲ್ಯಾಣ ಮಂಟಪ ಸೇರಿ 203 ಕಟ್ಟಡಗಳು ಇದುವರೆಗೂ ಬಾಗಿಲು ತೆರೆದಿಲ್ಲ.

ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರ ನೀಡುವುದಕ್ಕಾಗಿ 203 ಕಟ್ಟಡಗಳನ್ನು ವಶಕ್ಕೆ ಪಡೆದು ಕಾರ್ಮಿಕ ಇಲಾಖೆ ಸುಪರ್ದಿಗೆ ನೀಡಿರುವುದಾಗಿ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಹೇಳಿದ್ದಾರೆ. ಆದರೆ, ಕಾರ್ಮಿಕ ಇಲಾಖೆಬಹುತೇಕ ಕಟ್ಟಡಗಳಲ್ಲಿ ತಯಾರಿಯನ್ನೇ ಶುರು ಮಾಡಿಲ್ಲ.

ವಸತಿ ಹಾಗೂ ಊಟೋಪಚಾರಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಕಾರ್ಮಿಕ ಇಲಾಖೆಗೆ ನೀಡಿರುವುದಾಗಿ ಬಿಬಿಎಂಪಿ ಹೇಳುತ್ತಿದೆ. ಆದರೆ, ಅಂಥ ಸೌಕರ್ಯ ಕಲ್ಪಿಸುವ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಇದುವರೆಗೂ ಕ್ರಮ ಕೈಗೊಂಡಿಲ್ಲ.

ADVERTISEMENT

ಕಟ್ಟಡಗಳು ಎಲ್ಲಿವೆ ? ಎಂಬ ಬಗ್ಗೆ ಬಿಬಿಎಂಪಿ ಸಿದ್ಧಪಡಿಸಿರುವ ಪಟ್ಟಿಯನ್ನು ಕಾಗದದಲ್ಲಿ ಮಾತ್ರ ನೋಡಿರುವ ಅಧಿಕಾರಿಗಳು, ಕಟ್ಟಡದ ಸ್ಥಳಕ್ಕೆ ಇದುವರೆಗೂ ಹೋಗಿ ಪರಿಶೀಲನೆ ನಡೆಸಿಲ್ಲ ಎಂಬ ಆರೋಪವಿದೆ.

ಬಿಬಿಎಂಪಿ ಪ್ರಕಟಿಸಿರುವ ಪಟ್ಟಿಯಲ್ಲಿರುವ ಬಹುತೇಕ ಕಟ್ಟಡಗಳಿಗೆ ಬೀಗ ಹಾಕಲಾಗಿದ್ದು, ಕಟ್ಟಡದ ಮಾಲೀಕರೇ ನೇಮಿಸಿಕೊಂಡಿರುವ ಸೆಕ್ಯುರಿಟಿ ಸಿಬ್ಬಂದಿ ದಿನದ 24 ಗಂಟೆಯೂ ಕಾವಲು ಕಾಯುತ್ತಿದ್ದಾರೆ.

‘ಇಲ್ಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಿದ್ದಾರಾ’ ಎಂಬ ಪ್ರಶ್ನೆಗೆ ಪಶ್ಚಿಮ ಕಾರ್ಡ್‌ ರಸ್ತೆಯ ‘ಸಪ್ತಪದಿ’ ಕಲ್ಯಾಣ ಮಂಟಪದ ಸೆಕ್ಯುರಿಟಿ ಸಿಬ್ಬಂದಿ, ‘ಆ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಇಡೀ ದಿನ ಇಲ್ಲಿ ಇರುತ್ತೇವೆ. ಇದುವರೆಗೂ ಯಾರೊಬ್ಬರೂ ಕಲ್ಯಾಣ ಮಂಟಪಕ್ಕೆ ಬಂದಿಲ್ಲ’ ಎಂದರು.

ಗೌರಿಶಂಕರ, ರಾಜಹಂಸ, ಪದ್ಮಾವತಿ, ಭೀಮರಾವ್ ಪ್ಯಾಲೇಸ್, ಚೌಡೇಶ್ವರಿ, ನಾಗದೇವಕಿ ಪ್ಯಾಲೇಸ್, ಶುಭಾರಾಮ್, ಸಪ್ತಗಿರಿ, ಓಸ್ವಾಲ್ ಕಮ್ಯೂನಿಟಿ ಸೆಂಟರ್, ಪ್ರೇಮಾನಂದ ಕನ್ವೆನ್ಶನ್ ಹಾಲ್, ಶಿವಪ್ರಭ, ಗಂಗಮ್ಮ ತಿಮ್ಮಯ್ಯ ಕನ್ವೆನ್ಶನ್ ಹಾಲ್ ಸೇರಿ ಬಹುತೇಕ ಕಲ್ಯಾಣ ಮಂಟಪಗಳನ್ನು ಬಂದ್ ಮಾಡಲಾಗಿದೆ. ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರ ಕಲ್ಪಿಸುವ ಯಾವುದೇ ತಯಾರಿಯೂ ಈ ಕಟ್ಟಡಗಳಲ್ಲಿ ನಡೆಯುತ್ತಿಲ್ಲ.

ಅಧಿಕಾರಿಗಳು ನೀಡಿದ್ದ ಪಟ್ಟಿಗೆ ಸಹಿ: ತಮ್ಮ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪ, ಕನ್ವೆನ್ಷನ್ ಹಾಲ್, ಸಭಾಭವನಗಳ ಪಟ್ಟಿ ನೀಡುವಂತೆ ಬಿಬಿಎಂಪಿ ಆಯುಕ್ತರು, ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚಿಸಿದ್ದರು.

ಆ ಅಧಿಕಾರಿಗಳು ನೀಡಿದ್ದ ಪಟ್ಟಿಗೆ ಆಯುಕ್ತರು ಒಪ್ಪಿಗೆ ನೀಡಿ, ಕಾರ್ಮಿಕ ಇಲಾಖೆಗೆ ಕಳುಹಿಸಿದ್ದಾರೆ. ಆದರೆ, ಆ ಕಟ್ಟಡಗಳಲ್ಲಿ ಯಾವೆಲ್ಲ ಸೌಕರ್ಯ ಕಲ್ಪಿಸಲಾಗಿದೆ ಎಂಬ ಬಗ್ಗೆ ಯಾರೊಬ್ಬರೂ ಪರಿಶೀಲನೆ ನಡೆಸಿಲ್ಲ.

ಅಗತ್ಯಕ್ಕೆ ತಕ್ಕಂತೆ ಕಟ್ಟಡ ಬಳಕೆ: ‘ಎಲ್ಲ ಕಟ್ಟಡಗಳಲ್ಲೂ ವಸತಿ ಹಾಗೂ ಊಟೋಪಚಾರ ಕಲ್ಪಿಸಲು ತಯಾರಿ ಬೇಕಿಲ್ಲ. ಕಾರ್ಮಿಕರ ಸಂಖ್ಯೆಗೆ ತಕ್ಕಂತೆ ಅಗತ್ಯವಿರುವ ಕಡೆಗಳಲ್ಲಿ ಮಾತ್ರ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದುಕಾರ್ಮಿಕ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘203 ಕಟ್ಟಡಗಳಿಗೂ ಮುಂಚೆಯೇ ಶಾಲೆ ಹಾಗೂ ಸರ್ಕಾರಿ ಜಾಗಗಳಲ್ಲಿ ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಅಗತ್ಯಬಿದ್ದರೆ ಮಾತ್ರ 203 ಕಟ್ಟಡಗಳನ್ನು ಆದ್ಯತೆ ಮೇರೆಗೆ ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು.

ಬಿಬಿಎಂಪಿ ಅಧಿಕಾರಿಯೊಬ್ಬರು, ‘ಕಲ್ಯಾಣ ಮಂಟಪದ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಈಗಾಗಲೇ ನಾಲ್ಕು ಶಾಲೆಗಳಲ್ಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಿದ್ದೇವೆ’ ಎಂದರು.

ಸಂಪರ್ಕಕ್ಕೆ ಸಿಗದ ಆಯುಕ್ತರು

203 ಕಟ್ಟಡಗಳಲ್ಲಿ ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ ಕಲ್ಪಿಸುವ ಸಂಬಂಧ ಮಾಹಿತಿ ಪಡೆಯಲು ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ಹಾಗೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ
ಪಿ.ಮಣಿವಣ್ಣನ್ ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.