ADVERTISEMENT

ಬೆಂಗಳೂರು: ವಿಮಾ ಸೌಲಭ್ಯ ಕಲ್ಪಿಸಲು ಮಸಣ ಕಾರ್ಮಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:56 IST
Last Updated 9 ಆಗಸ್ಟ್ 2020, 16:56 IST

ಬೆಂಗಳೂರು: ‘ರಾಜ್ಯದ ಸ್ಮಶಾನದಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೆ ವಿಮಾ ಸೌಲಭ್ಯ ಕಲ್ಪಿಸಬೇಕು’ ಎಂದು ರಾಜ್ಯ ಮಸಣ ಕಾರ್ಮಿಕರ ಸಂಘ ಒತ್ತಾಯಿಸಿದೆ.

ಈ ಸಂಬಂಧ ಸಂಘದ ಸಂಚಾಲಕ ಯು. ಬಸವರಾಜು ಹಾಗೂ ಸಹ ಸಂಚಾಲಕಿ ಬಿ. ಮಾಳಮ್ಮ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ನೀಡಿದ್ದಾರೆ.

‘ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸಾವುಗಳು ಸಂಭವಿಸುತ್ತಿವೆ. ಅಂಥವರ ಅಂತ್ಯಕ್ರಿಯೆಯನ್ನು ಮಸಣ ಕಾರ್ಮಿಕರ ಸಹಾಯದಿಂದ ಮಾಡಲಾಗುತ್ತಿದೆ. ಅಸಹಜವಾಗಿ ಮೃತಪಟ್ಟವರಿಗೆ ಕೊರೊನಾ ಇಲ್ಲವೆಂದು ಹೇಳಲಾಗದು. ಅಂಥವರ ಅಂತ್ಯಕ್ರಿಯೆಯನ್ನೂ ಕಾರ್ಮಿಕರು ಧೈರ್ಯದಿಂದ ಮಾಡುತ್ತಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ADVERTISEMENT

‘ಮಸಣ ಕಾರ್ಮಿಕರಾಗಿರುವ ಎಲ್ಲರೂ ಬಡವರು. ಅಂತ್ಯಕ್ರಿಯೆ ದುಡಿಮೆಯನ್ನೇ ನಂಬಿದವರು. ಕೊರೊನಾದಂಥ ಸಂಕಷ್ಟ ಕಾಲದಲ್ಲೂ ಕಾರ್ಮಿಕರು ಕೆಲಸ ಮಾಡುತ್ತಿದ್ಧಾರೆ. ಅಂತ್ಯಕ್ರಿಯೆಗಳನ್ನೂ ನೆರವೇರಿಸುತ್ತಿದ್ದಾರೆ. ಇಂಥ ಕಾರ್ಮಿಕರ ಜೀವಕ್ಕೆ ರಕ್ಷಣೆ ಬೇಕಾಗಿದೆ‘ ಎಂದೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.