ADVERTISEMENT

ಬೆಂಗಳೂರು | ಸಂಪೂರ್ಣ ಲಾಕ್ ಆಗದ ರಾಜಧಾನಿ

ಅನಗತ್ಯವಾಗಿ ರಸ್ತೆಗೆ ಇಳಿದವರ ವಾಹನ ವಶಕ್ಕೆ ಪಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 20:30 IST
Last Updated 15 ಜುಲೈ 2020, 20:30 IST
ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ ಮತ್ತು ಕೆಳಗಿನ ರಸ್ತೆಯಲ್ಲಿ ಬುಧವಾರ ವಾಹನಗಳ ಓಡಾಟ ಕಡಿಮೆಯಿತ್ತು (ಎಡಚಿತ್ರ) ನಗರದ ಹಡ್ಸನ್ ವೃತ್ತ ವಾಹನಗಳ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿರುವುದು -–ಪ್ರಜಾವಾಣಿ ಚಿತ್ರಗಳು
ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ ಮತ್ತು ಕೆಳಗಿನ ರಸ್ತೆಯಲ್ಲಿ ಬುಧವಾರ ವಾಹನಗಳ ಓಡಾಟ ಕಡಿಮೆಯಿತ್ತು (ಎಡಚಿತ್ರ) ನಗರದ ಹಡ್ಸನ್ ವೃತ್ತ ವಾಹನಗಳ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿರುವುದು -–ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಲಾಕ್‌ಡೌನ್ ಇದ್ದರೂ ರಸ್ತೆಯಲ್ಲೇ ಇದ್ದ ವಾಹನಗಳು, ಮಧ್ಯಾಹ್ನದ ನಂತರ ಮುಚ್ಚಿದ ಅಂಗಡಿ ಮುಂಗಟ್ಟುಗಳು, ಎಂದಿನಂತೆ ಕಾರ್ಯನಿರ್ವಹಿಸಿದ ಕೈಗಾರಿಕೆಗಳು... ಇದು ರಾಜಧಾನಿಯಲ್ಲಿನ ಲಾಕ್‌ಡೌನ್‌ನ ಮೊದಲ ದಿನದ ಚಿತ್ರಣ.

ಲಾಕ್‌ಡೌನ್ ಆದೇಶಕ್ಕೆ ರಾಜಧಾನಿಯ ಒಂದು ವರ್ಗದ ಜನರು ಬೆಲೆ ಕೊಟ್ಟು ಮನೆಯಲ್ಲೇ ಇದ್ದರೆ, ಕೆಲವರು ಅಷ್ಟೇನೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

ಲಾಕ್‌ಡೌನ್ ಕಾರಣ ಪೊಲೀಸರು ಮಂಗಳವಾರ ರಾತ್ರಿಯೇ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಹಲವು ಫ್ಲೈಓವರ್‌ಗಳನ್ನು ಬಂದ್ ಮಾಡಿದ್ದರು. ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಅಲ್ಲಲ್ಲಿ ಪೊಲೀಸರು ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದರು.

ADVERTISEMENT

ಆದರೂ, ಬೆಳಿಗ್ಗೆಯಿಂದ ವಾಹನಗಳ ಸಂಚಾರ ಎಂದಿನಂತೆ ಇತ್ತು. ತುಮಕೂರು ರಸ್ತೆ ಮೂಲಕ ಭಾರಿ ಸಂಖ್ಯೆಯಲ್ಲಿ ವಾಹನ ಸವಾರರು ನಗರದೊಳಗೆ ಬರುವುದು ಸಾಮಾನ್ಯವಾಗಿತ್ತು. ಕೈಗಾರಿಕೆಗಳು ಮತ್ತು ಸಿದ್ಧ ಉಡುಪುಗಳ ತಯಾರಿಕಾ ಕಾರ್ಖಾನೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದೂ ಇದಕ್ಕೆ ಕಾರಣವಾಗಿತ್ತು.

ಅಗತ್ಯ ಸೇವೆ ಹೆಸರಿನಲ್ಲಿ ಕಂಪನಿಗಳ ಗುರುತಿನ ಚೀಟಿ ತೋರಿಸಿ ನಿರಾಯಾಸವಾಗಿ ಜನರು ನಿರಂತರವಾಗಿ ಸಂಚರಿಸಿದರು. ಪೊಲೀಸರಿಲ್ಲದ ಕಡೆ ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿಯೂ ವಾಹನ ಸವಾರರು ಸಾಗಿದರು.

ಸಾರಿಗೆ ಬಸ್‌ಗಳು, ಆಟೊ ಮತ್ತು ಟ್ಯಾಕ್ಸಿಗಳ ಸಂಚಾರ ಇರಲಿಲ್ಲ. ಅಗತ್ಯ ಸೇವೆ ಒದಗಿಸುವ ಸಿಬ್ಬಂದಿಗಾಗಿ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಮಾಡಿತ್ತು.

ವಾಹನಗಳು ವಶ: ನಗರದೊಳಕ್ಕೆ ಅನಗತ್ಯವಾಗಿ ಪ್ರವೇಶಿಸಲು ಯತ್ನಿಸುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರು.

ತುಮಕೂರು ರಸ್ತೆ ಫ್ಲೈಓವರ್‌ನಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಸರ್ವೀಸ್ ರಸ್ತೆಯಲ್ಲಿ ಬರುವ ವಾಹನಗಳನ್ನು ನಾಗಸಂದ್ರ ಬಳಿ ತಡೆದ ಪೊಲೀಸರು, ಸವಾರರ ಗುರುತಿನ ಚೀಟಿ ಪರಿಶೀಲಿಸಿದರು. ಅಗತ್ಯ ಸೇವೆ ಹೊರತುಪಡಿಸಿ ಅನಗತ್ಯ ಸಂಚಾರ ಎನಿಸುವ ವಾಹನಗಳನ್ನು ವಶಕ್ಕೆ ಪಡೆದರು.

ಮಧ್ಯಾಹ್ನ ಮುಚ್ಚಿದ ಅಂಗಡಿಗಳು
ಬೆಳಿಗ್ಗೆ 5ರಿಂದ ಮಧ್ಯಾಹ್ನ 12 ಗಂಟೆ ತನಕ ಅಂಗಡಿ– ಮುಂಗಟ್ಟುಗಳಲ್ಲಿ ವಹಿವಾಟು ನಡೆಯಿತು. ದಿನಸಿ, ತರಕಾರಿ, ಹಣ್ಣು, ಹೂವಿನ ಅಂಗಡಿಗಳು, ಬೇಕರಿಗಳು ಜತೆಗೆ ಹಾರ್ಡ್‌ವೇರ್ ಅಂಗಡಿಗಳು ತೆರೆದಿದ್ದವು. 12 ಗಂಟೆ ಬಳಿಕ ಹಲವರು ಸ್ವಯಂ ಪ್ರೇರಿತವಾಗಿ ಮುಚ್ಚಿದರು. ವ್ಯಾಪಾರ ಮುಂದುವರಿಸಿದ್ದ ಬೀದಿಬದಿ ವ್ಯಾಪಾರಿಗಳನ್ನು ಪೊಲೀಸರು ಜಾಗ ಖಾಲಿ ಮಾಡಿಸಿದರು.

ಕಾರ್ಯನಿರ್ವಹಿಸಿದ ಕೈಗಾರಿಕೆಗಳು
ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಮತ್ತು ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸರ್ಕಾರ ತಡವಾಗಿ ಅನುಮತಿ ನೀಡಿದ್ದರಿಂದ ಕಾರ್ಮಿಕರಿಗೆ ಮಾಹಿತಿ ನೀಡಲು ಸಾಧ್ಯವಾಗದ ಕಾರಣಕ್ಕೆ ಶೇ 25ರಿಂದ ಶೇ 30ರಷ್ಟು ಕೈಗಾರಿಕೆಗಳನ್ನು ತೆರೆಯಲು ಸಾಧ್ಯವಾಗಿಲ್ಲ. ಗುರುವಾರದಿಂದ ಎಲ್ಲಾ ಕೈಗಾರಿಕೆಗಳು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

‘ಈ ನಡುವೆ, ಹಲವು ಕಾರ್ಮಿಕರು ಈಗಾಗಲೇ ಊರುಗಳಿಗೆ ತೆರಳಿದ್ದಾರೆ. ಶೇ 75ರಷ್ಟು ಕಾರ್ಮಿಕರಿಂದಲೇ ಕೆಲಸ ನಿರ್ವಹಿಸಲಾಗುತ್ತಿದೆ’ ಎಂದುಪೀಣ್ಯ ಕೈಗಾರಿಕಾ ಸಂಘದ ಉಪಾದ್ಯಕ್ಷ ಸಿ.ಎಸ್. ಪ್ರಾಣೇಶ್ ಹೇಳಿದರು.

‘ಕೈಗಾರಿಕೆಗಳಿಗೆ ವಿನಾಯಿತಿ ನೀಡಿದ್ದರಿಂದ ಉತ್ಪಾದನೆ ಮತ್ತು ಉದ್ಯೋಗ ಕಾಪಾಡಿಕೊಳ್ಳಲು ಸಾಧ್ಯವಾಗಿದೆ’ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಹೇಳಿದರು.

ಪರಿಸ್ಥಿತಿ ನಿಭಾಯಿಸಿದಶೇ 40ರಷ್ಟು ಪೊಲೀಸರು
ಈ ಹಿಂದಿನ ಸಂದರ್ಭಕ್ಕೆ ಹೋಲಿಸಿದರೆ, ಶೇ 40ರಷ್ಟು ಪೊಲೀಸ್ ಸಿಬ್ಬಂದಿ ಬುಧವಾರದ ಲಾಕ್‌ಡೌನ್ ನಿಭಾಯಿಸಿದರು.

ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್‌ ನಗರ ಸುತ್ತಾಡಿ ರಸ್ತೆಗಳಲ್ಲಿ ನಿಂತಿದ್ದವರನ್ನು ವಿಚಾರಿಸಿದರು. ಕಬ್ಬನ್ ಪಾರ್ಕ್ ಸುತ್ತಮುತ್ತ ನಡೆದಾಡಿ ಭದ್ರತೆ ಪರಿಶೀಲಿಸಿದರು.

ಕೆ.ಆರ್. ಮಾರುಕಟ್ಟೆಗೆ ಹೊಂದಿಕೊಂಡಿರುವ ಕಲಾಸಿಪಾಳ್ಯ, ಅವೆನ್ಯೂ ರಸ್ತೆ, ವಿವಿ ಪುರ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳ ಸಂಪರ್ಕ ರಸ್ತೆಗಳನ್ನು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರು ಬಂದ್ ಮಾಡಿದರು. ಅಗತ್ಯ‌ ಸೇವಾ ವಾಹನಗಳಿಗೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ನೀಡಿದ್ದರು.

ಟೌನ್ ಹಾಲ್ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿದ್ದು ಬಿಟ್ಟರೆ ತಪಾಸಣೆ ಇರಲಿಲ್ಲ. ವಿಜಯನಗರ, ಗಾಂಧಿ ಬಜಾರ್, ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ ವೃತ್ತಗಳಲ್ಲಿ ಜನರನ್ನು ಚದುರಿಸಲು ಪೊಲೀಸರು ಲಾಠಿ ರುಚಿ ತೋರಿಸಿದರು. ಪಾದರಾಯನಪುರದ ಗಲ್ಲಿ ಗಲ್ಲಿಯಲ್ಲಿ ಸುತ್ತಿ ಜನರನ್ನು ಪೊಲೀಸರು ಚದುರಿಸಿದರು.

ಪರದಾಡಿದ ರೈಲು ಪ್ರಯಾಣಿಕರು
ಲಾಕ್‌ಡೌನ್ ಇದ್ದರೂ ವಿಶೇಷ ರೈಲುಗಳ ಕಾರ್ಯಾಚರಣೆ ಇದ್ದ ಕಾರಣ ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ಜಮಾಯಿಸಿದ್ದರು.

ಒಡಿಶಾಗೆ ಹೊರಟ ರೈಲಿನಲ್ಗಿ ತೆರಳಲು ವಲಸೆ ಕಾರ್ಮಿಕರು ಬಂದಿದ್ದರು. ಇದರಿಂದ ಪರಿಸ್ಥಿತಿ ನಿಭಾಯಿಸಲು ರೈಲ್ವೆ ಸಿಬ್ಬಂದಿ ಪರದಾಡಿದರು.

ಹೊರ ಊರುಗಳಿಂದನಗರಕ್ಕೆ ಬಂದ, ರೈಲಿನಿಂದ ಇಳಿದ ಪ್ರಯಾಣಿಕರು ಕೂಡ ಮನೆಗಳಿಗೆ ತೆರಳಲು ಬಸ್‌, ಟ್ಯಾಕ್ಸಿ ಅಥವಾ ಆಟೋರಿಕ್ಷಾ ಇಲ್ಲದ ಕಾರಣ ಸಂಕಷ್ಟ ಪಟ್ಟರು.

‘ಲಾಕ್‌ಡೌನ್ ಇದ್ದರೂ ವಿಶೇಷ ರೈಲುಗಳ ಸಂಚಾರ ಇರಲಿದೆ. ರೈಲು ನಿಲ್ದಾಣಗಳಿಂದ ಮನೆಗಳಿಗೆ ತಲುಪಲು ಪ್ರಯಾಣಿಕರೇ ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.