ADVERTISEMENT

ಸಣ್ಣ ಕೈಗಾರಿಕೆಗಳಿಗೆ ಮೂಲಸೌಕರ್ಯದ ಕೊರತೆ: ಎಐಎಂಎ ಅಧ್ಯಕ್ಷ ನಿಖಿಲ್ ಸಾಹ್ನಿ

ರಾಷ್ಟ್ರೀಯ ಸಮಾವೇಶದಲ್ಲಿ ಎಐಎಂಎ ಅಧ್ಯಕ್ಷ ನಿಖಿಲ್ ಸಾಹ್ನಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 0:10 IST
Last Updated 16 ಮಾರ್ಚ್ 2024, 0:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಕೃಷಿ ಕ್ಷೇತ್ರದ ನಂತರ ಅತಿಹೆಚ್ಚು ಉದ್ಯೋಗಗಳನ್ನು ನೀಡುತ್ತಿರುವುದು ಸಣ್ಣ ಕೈಗಾರಿಕಾ ಕ್ಷೇತ್ರ. ಆದರೆ, ಸಣ್ಣ ಕೈಗಾರಿಕೆಗಳಿಗೆ ಮೂಲಸೌಕರ್ಯಗಳ ಕೊರತೆ ಇದೆ’ ಎಂದು ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್‌ ಅಸೋಸಿಯೇಶನ್‌ (ಎಐಎಂಎ) ಅಧ್ಯಕ್ಷ ನಿಖಿಲ್‌ ಸಾಹ್ನಿ ತಿಳಿಸಿದರು.

ಎಐಎಂಎ ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ವತಿಯಿಂದ ಶುಕ್ರವಾರ ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ (ಎಂಎಸ್‌ಎಂಇ) 13ನೇ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

’ಕೊರೊನಾ ಕಾಲದಲ್ಲಿ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿದವು. ನೀತಿ ನಿರೂಪಕರು ಸಣ್ಣ ಕೈಗಾರಿಕೆಗಳಿಗೆ ಅನುಕೂಲ ಆಗುವಂಥ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ’ ಎಂದು ದೂರಿದರು.

‘ಬೃಹತ್‌ ಕೈಗಾರಿಕೆಗಳ ಬೆನ್ನೆಲುಬಾಗಿ ಸಣ್ಣ ಕೈಗಾರಿಕೆಗಳು ಕೆಲಸ ಮಾಡುತ್ತವೆ. ದೊಡ್ಡ ಉದ್ದಿಮೆಗಳಿಗೆ ಬೇಕಾದ ವಸ್ತುಗಳನ್ನು ಸಣ್ಣ ಕೈಗಾರಿಕೆಗಳು ಪೂರೈಸುತ್ತವೆ. ಆದರೆ, ಬೃಹತ್‌ ಕೈಗಾರಿಕೆಗಳಿಗೆ ಸಿಗುವ ಮೂಲಸೌಲಭ್ಯ ಮತ್ತು ಪ್ರೋತ್ಸಾಹ ಸಣ್ಣ ಕೈಗಾರಿಕೆಗಳಿಗೆ ಸಿಗುತ್ತಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

ಸಣ್ಣ ಕೈಗಾರಿಕೆಗಳಿಗೆ ಭೂಮಿ ಸಿಗುವುದಿಲ್ಲ. ಸಿಕ್ಕಿದರೂ ಅದಕ್ಕೆ ಸರಿಯಾದ ರಸ್ತೆ ಇರುವುದಿಲ್ಲ. ನೀರು, ವಿದ್ಯುತ್‌ ಸಮಸ್ಯೆ ಇರುತ್ತದೆ. ಹಾಗಾಗಿ ಬಹುತೇಕ ಸಣ್ಣ ಕೈಗಾರಿಕೆಗಳು ಖಾಸಗಿ ಜಾಗದಲ್ಲಿವೆ ಎಂದು ವಿವರಿಸಿದರು.

ಇಂಥ ಎಲ್ಲ ಅಡೆತಡೆಗಳ ನಡುವೆಯೂ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಣ್ಣ ಕೈಗಾರಿಕೆಗಳು ಬೆಳೆಯಬೇಕು. ಡಿಜಿಟಲೀಕರಣ ಇಂದಿನ ಅಗತ್ಯ. ಗುಣಮಟ್ಟದ ವಸ್ತುಗಳನ್ನು ಉತ್ಪಾದನೆ ಮಾಡಬೇಕು ಎಂದು ಸಲಹೆ ನೀಡಿದರು.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಜೆ.ಎಸ್. ಜುನೆಜ ಅವರು ಸಮಾವೇಶದ ಸ್ಮರಣಸಂಚಿಕೆ ಬಿಡುಗಡೆ ಮಾಡಿದರು. 

ಎಐಎಂಎ ಮಹಾನಿರ್ದೇಶಕಿ ರೇಖಾ ಸೇಥಿ, ಕಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ, ಉಪಾಧ್ಯಕ್ಷ ರಾಜಗೋಪಾಲ್ ಎಂ.ಜಿ., ಪ್ರಧಾನ ಕಾರ್ಯದರ್ಶಿ ನಾಗರಾಜು ಎಸ್‌. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.