ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರಿಗೆ ಮಸಿ ಬಳಿದು ಹಲ್ಲೆ ಮಾಡಿರುವುದನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದ ಗುಂಪು ಮಾರ್ಚ್ 22ರಂದು ನಡೆಸಲು ಕರೆಕೊಟ್ಟಿರುವ ಕರ್ನಾಟಕ ಬಂದ್‌ಗೆ ಪ್ರಮುಖ ಸಂಘಟನೆಗಳು ಬೆಂಬಲ ನೀಡಿಲ್ಲ. ಮುಗಿದು ಹೋದ ಪ್ರಕರಣ ಇಟ್ಟುಕೊಂಡು ಬಂದ್ ಮಾಡುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ.
ಬಸ್ ನಿರ್ವಾಹಕನ ಮೆಲೆ ಹಲ್ಲೆ ನಡೆದಾಗ ಬೆಳಗಾವಿಗೆ ಹೋಗಿ ದೊಡ್ಡ ಸ್ವರೂಪದ ಚಳವಳಿ ನಡೆಸಲಾಗಿತ್ತು. ಸುಳ್ಳು ಪೋಕ್ಸೊ ದೂರನ್ನು ವಾಪಸ್ ಪಡೆಯುವಂತೆ ಮಾಡಲಾಗಿತ್ತು. ಮೊಕದ್ದಮೆ ದಾಖಲಿಸಿಕೊಂಡಿದ್ದ ಇನ್‌ಸ್ಪೆಕ್ಟರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಕನ್ನಡಿಗರ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವುದಾಗಿ ಪೊಲೀಸ್ ಕಮಿಷನರ್ ಭರವಸೆ ನೀಡಿದ್ದಾರೆ. ಹೀಗಿರುವಾಗ ಬಂದ್ ಮಾಡುವ ಅಗತ್ಯ ಇರುವುದಿಲ್ಲ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ, ಪ್ರಧಾನ ಕಾರ್ಯದರ್ಶಿ ಬಿ. ಸಣ್ಣೀರಪ್ಪ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳ ಮೇಲೆ, ನೌಕರರ ಮೇಲೆ ದಾಳಿ ನಡೆದರೆ ಉತ್ತರ ನೀಡಲು ಕರವೇ ಸಿದ್ಧವಿದೆ. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ‘ಕರ್ನಾಟಕ ಬಂದ್’ ಕರೆಗಳಿಗೆ ಕರವೇ ಕೈಜೋಡಿಸಿಲ್ಲ. ಹೋರಾಟಗಾರರ ಕೊನೆಯ ಅಸ್ತ್ರ ಬಂದ್ ಆಗಬೇಕೇ ಹೊರತು ಎಲ್ಲದಕ್ಕೂ ಬಂದ್ ಪರಿಹಾರವಲ್ಲ. ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದೆ. ದುಡಿದು ತಿನ್ನುವವರಿಗೆ ಬಂದ್‌ನಿಂದ ತೊಂದರೆಯಾಗುತ್ತದೆ. ಕೆಪಿಎಸ್‌ಸಿ ಪರೀಕ್ಷೆ ಬರೆದಿರುವ ಕನ್ನಡ ಮಾಧ್ಯಮದ 70 ಸಾವಿರ ಮಕ್ಕಳು ತೊಂದರೆಯಲ್ಲಿದ್ದಾರೆ. ಈ ಬಗ್ಗೆ ಚಳವಳಿ ರೂಪಿಸಲಾಗುತ್ತಿದೆ. ವಾಟಾಳ್ ಅವರ ಬಗ್ಗೆ ಗೌರವ ಇಟ್ಟುಕೊಂಡೇ ಬಂದ್‌ನಿಂದ ದೂರ ಉಳಿಯುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಪಾದಯಾತ್ರೆ ಮಾಡಿತ್ತು. ಈಗ ಅದರ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ಕೂಡ ಅನುಮತಿ ನೀಡುತ್ತಿಲ್ಲ. ಇದರ ವಿರುದ್ಧ ಮಾರ್ಚ್ 21ರಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ಕರ್ನಾಟಕ ಬಂದ್‌ಗೆ ಬೆಂಬಲಿಸುವ ಬಗ್ಗೆ ಸದ್ಯ ತೀರ್ಮಾನ ಕೈಗೊಂಡಿಲ್ಲ’ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ನೈತಿಕ ಬೆಂಬಲ: ಹೋಟೆಲ್ ಬಂದ್ ಮಾಡುವುದಿಲ್ಲ. ಕಪ್ಪು ಪಟ್ಟಿ ಧರಿಸಿ ಕಾರ್ಮಿಕರು ಕೆಲಸ ಮಾಡಲಿದ್ದಾರೆ ಎಂದು ಹೋಟೆಲ್ ಮಾಲೀಕರ ಅಸೋಸಿಯೇಶನ್ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.
ಬಸ್ ಸಂಚಾರ ಬಂದ್ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ನೈತಿಕ ಬೆಂಬಲವಿದೆ ಎಂದು ಎಂದು ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್. ನಟರಾಜ ಶರ್ಮ ಅಭಿಪ್ರಾಯಪಟ್ಟಿದ್ದಾರೆ.
ವರ್ಷಪೂರ್ತಿ ಓದಿ ಈಗ ಅಂತಿಮ ಪರೀಕ್ಷೆ ಬರೆಯುವ ಹಂತದಲ್ಲಿ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ತೊಂದರೆಯಾಗದಂತೆ ನೈತಿಕ ಬೆಂಬಲ ನೀಡಲಾಗುವುದು ಎಂದು ಖಾಸಗಿ ಶಾಲಾ ವಾಹನಗಳ ಚಾಲಕರ ಯೂನಿಯನ್ ಅಧ್ಯಕ್ಷ ಜಿ. ರವಿಕುಮಾರ್ ಹೇಳಿದ್ದಾರೆ.
ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಓಲಾ ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಅಶೋಕ್, ಸಾರಥಿ ಆಟೊ ಚಾಲಕರ ಸಂಘದ ಅಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.