ADVERTISEMENT

ಮಹಿಳಾ ಪೊಲೀಸರಿಂದ ರಾತ್ರಿ ಗಸ್ತು

ನಗರದಲ್ಲಿ ಅಭದ್ರತೆ ಭಾವ– ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 19:53 IST
Last Updated 13 ಡಿಸೆಂಬರ್ 2019, 19:53 IST
   

ಬೆಂಗಳೂರು: ಬೆಂಗಳೂರಿನಲ್ಲಿ‌ ಸಂಜೆ ಮತ್ತು ರಾತ್ರಿ ಹೊತ್ತು ಓಡಾಡುವ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಮಹಿಳಾ ಪೊಲೀಸರಿಂದಲೂ ಗಸ್ತು ತಿರುಗುವ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ಪೊಲೀಸ್ ಗಸ್ತು ಸಹ ಹೆಚ್ಚಿಸಬೇಕು ಎಂದು ನಿರ್ದೇಶನ ನೀಡಿದರು.

ರಸ್ತೆ, ಕೆರೆಗಳ ಅಭಿವೃದ್ಧಿಗೆ ಗಮನ: ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ‌ ಗಮನ ಹರಿಸಬೇಕು, ಕೆರೆಗಳ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಲು ಆದೇಶ ನೀಡಿದರು.

ADVERTISEMENT

ಅನುದಾನ ಬಿಡುಗಡೆಗೆ ನಿರ್ದೇಶನ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್ ವೆಚ್ಚ ಮತ್ತು ವಿದ್ಯಾರ್ಥಿ ವೇತನಗಳಿಗೆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಬಿಬಿಎಂಪಿಗೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಚರ್ಚೆ ನಡೆಯಿತು. ಆದರೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೇ ಇರಲಿಲ್ಲ ಎಂದು ಹೇಳಲಾಗಿದೆ.

11 ಮೆಗಾವಾಟ್‌ ವಿದ್ಯುತ್‌ ಘಟಕ?

ಬೆಂಗಳೂರು ಕಸ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 5 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಯೋಜನೆ ಕಾರ್ಯಗತಗೊಂಡಿಲ್ಲ. ಇದೀಗ 11 ಮೆಗಾವಾಟ್‌ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಸ್ಥಾಪಿಸುವ ಪ್ರಸ್ತಾವ ಸರ್ಕಾರದ ಮುಂದೆ ಬಂದಿದೆ.

5 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಘಟಕದ ಅರ್ಧದಷ್ಟು ವೆಚ್ಚದಲ್ಲಿ 11 ಮೆಗಾವಾಟ್‌ ಸಾಮರ್ಥ್ಯದ ಘಟಕದ ನಿರ್ಮಿಸಬಹುದು ಎಂಬುದನ್ನು ಸರ್ಕಾರದ ಗಮನಕ್ಕೆ ತರಲಾಯಿತು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಇದರ ಬಗ್ಗೆ ಗಮನ ಹರಿಸಲು ಮುಖ್ಯಮಂತ್ರಿ ಅವರು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.