ADVERTISEMENT

ಬೆಂಗಳೂರು | ಹೆಣ್ಣು ಮಗು ಬೇಡವೆಂದು ಪತಿ ಗಲಾಟೆ: ಪತ್ನಿ ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 14:35 IST
Last Updated 6 ಅಕ್ಟೋಬರ್ 2025, 14:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಲಗ್ಗೆರೆಯಲ್ಲಿ ನಡೆದಿದೆ.

ರಕ್ಷಿತಾ (26) ಮೃತಪಟ್ಟ ಗೃಹಿಣಿ. ‘ಇದು ಆತ್ಮಹತ್ಯೆ ಅಲ್ಲ, ಕೊಲೆ’ ಎಂದು ರಕ್ಷಿತಾ ಕುಟುಂಬಸ್ಥರು ಆರೋಪಿಸಿದ್ದಾರೆ.‌

ADVERTISEMENT

ಕುಣಿಗಲ್ ಬಳಿಯ ಹುಲಿದುರ್ಗದ ರವೀಶ್ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆಯ ರಕ್ಷಿತಾ ಅವರು ನಾಲ್ಕು ವರ್ಷದ ಹಿಂದೆ ಮದುವೆ ಆಗಿದ್ದರು. ಲಗ್ಗೆರೆಯಲ್ಲಿ ನೆಲಸಿದ್ದರು. ದಂಪತಿಗೆ ಹೆಣ್ಣು ಮಗುವಿದೆ. ಖಾಸಗಿ ಬ್ಯಾಂಕ್‌ನಲ್ಲಿ ರವೀಶ್ ಅವರು ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

‘ಹೆಣ್ಣು ಮಗು ಬೇಡ. ಗಂಡು ಮಗು ಬೇಕೆಂದು ರವೀಶ್ ಅವರು ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಭಾನುವಾರ ರಾತ್ರಿ ಗಲಾಟೆ ವಿಕೋಪಕ್ಕೆ ಹೋಗಿತ್ತು. ಸೋಮವಾರ ಬೆಳಿಗ್ಗೆ ಕರೆ ಮಾಡಿದ್ದರೂ ರಕ್ಷಿತಾ ಅವರು ಕರೆ ಸ್ವೀಕರಿಸಿರಲಿಲ್ಲ. ಅವರ ತಂದೆ ತಿಮ್ಮರಾಜು ಅವರು ಮನೆಯ ಬಳಿಗೆ ಬಂದು ಬಾಗಿಲು ತೆಗೆದು ನೋಡಿದಾಗ ಘಟನೆ ನಡೆದಿರುವುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ರವೀಶ್ ಮನೆಯಲ್ಲಿ ಸಹೋದರ ಲೋಕೇಶ್ ಸಹ ವಾಸವಿದ್ದರು. ಭಾನುವಾರ ರಾತ್ರಿ ರವೀಶ್ ಮತ್ತು ಲೋಕೇಶ್ ಸಹ ಗಲಾಟೆ ಮಾಡಿಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

‘ಮಗುವನ್ನು ರವೀಶ್‌ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಮಗುವಿನ ಕಿವಿಯನ್ನೂ ಸುಟ್ಟಿದ್ದರು. ಮಗು ಜನಿಸಿದಾಗ ಆಸ್ಪತ್ರೆ ಬಿಲ್‌ ಅನ್ನೂ ಪಾವತಿ ಮಾಡಿರಲಿಲ್ಲ. ಈ ಹಿಂದೆಯೂ ಗಲಾಟೆ ನಡೆದಿತ್ತು. ಎರಡೂ ಕಡೆಯ ಕುಟುಂಬಸ್ಥರು ಸಂಧಾನ ನಡೆಸಿ ಕಳುಹಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ದೂರು ನೀಡಿದ್ದ ರಕ್ಷಿತಾ: ರವೀಶ್ ಹಾಗೂ ಲೋಕೇಶ್ ಅವರ ವಿರುದ್ಧ ಈ ಹಿಂದೆ ರಕ್ಷಿತಾ ಕುಟುಂಬಸ್ಥರು ದೂರು ನೀಡಿದ್ದರು. ಕೊಲೆ ಮಾಡಿ ನೇಣು ಹಾಕಲಾಗಿದೆ. ಎರಡು ದಿನದ ಹಿಂದೆಯೇ ಆಸ್ತಿ ಪತ್ರ ಮತ್ತು ಚಿನ್ನಾಭರಣ ಬೇರೆಡೆ ಕೊಂಡೊಯ್ದು ಕೃತ್ಯ ಎಸಗಿದ್ದಾರೆ. ಮನೆಗೆ ಹೊರಗಿನಿಂದ ಬಾಗಿಲು ಹಾಕಿದ್ದು ಕಂಡುಬಂತು. ರಕ್ಷಿತಾ ಸಾವಿನ ಕುರಿತು ಅನುಮಾನವಿದ್ದು, ಸೂಕ್ತ ತನಿಖೆ ಆಗಬೇಕು’ ಎಂದು ಕುಟುಂಬಸ್ಥರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.