
ಬೆಂಗಳೂರು: ನಗರದ ಹೊರವಲಯದ ಜಿಗಣಿ ಗ್ರಾನೈಟ್, ಮಾರ್ಬಲ್‌ಗಳಿಗೆ ಹೆಸರುವಾಸಿ. ಇಲ್ಲಿ ಈ ವಹಿವಾಟಿನಿಂದ ಸೃಷ್ಟಿಯಾಗುತ್ತಿರುವ ಮಾಲಿನ್ಯ ಕೆರೆಗಳ ಪರಿಸರಕ್ಕೆ ಹಾನಿ ಉಂಟುಮಾಡುತ್ತಿದೆ. ಗ್ರಾನೈಟ್ ಕತ್ತರಿಸುವ ಪ್ರಕ್ರಿಯೆಯಿಂದ ಹೊರಬರುವ ಬಿಳಿ ಕೆಸರು, ಕೆರೆಗಳಲ್ಲಿ ‘ಗಟ್ಟಿ ಮಾಲಿನ್ಯ’ಕ್ಕೆ ಕಾರಣವಾಗಿದೆ.
ಆನೇಕಲ್‌ನ ಜಿಗಣಿ, ಹಾರೋಗದ್ದೆ ಸೇರಿ ಹಲವು ಕೆರೆಗಳಿಗೆ ‘ಗ್ರಾನೈಟ್ ಕೆಸರು’ಸೇರಿದಂತೆ ಹಲವು ರೀತಿಯ ಕಲ್ಮಶ ಹರಿಯುತ್ತಿದೆ. ಒತ್ತುವರಿಯೂ ಆಗಿದೆ. ಇದನ್ನು ತಡೆಯಬೇಕು ಎಂದು ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಟಿಸಿಡಿಎ) ಸೂಚಿಸಿದೆ.
‘ಗ್ರಾನೈಟ್ ಕೆಸರು ಹರಿಯುವುದನ್ನು ತಡೆಯುವ ಬಗ್ಗೆ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್) ವಿವರ ಇಲ್ಲ. ಹೀಗಾಗಿ ಕೆರೆ ಅಭಿವೃದ್ಧಿಗೆ ಸಲ್ಲಿಸಿರುವ ಡಿಪಿಆರ್‌ಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಮಾಲಿನ್ಯ ತಡೆ ಹಾಗೂ ಒತ್ತುವರಿ ತೆರವು ನಂತರವಷ್ಟೇ ಅಭಿವೃದ್ಧಿ ಕೈಗೊಳ್ಳಬೇಕು ಎಂದುಡಿಪಿಆರ್‌ಗಳನ್ನು ವಾಪಸು ಕಳುಹಿಸಿದೆ.
ಬಿಬಿಎಂಪಿ, ನಗರ ಜಿಲ್ಲಾ ಪಂಚಾಯಿತಿ, ಕೆಲವು ಗ್ರಾಮ ಪಂಚಾಯಿತಿಗಳು ಕೆರೆಗಳ ಅಭಿವೃದ್ಧಿಗೆ ಡಿಪಿಆರ್‌ಗಳನ್ನು ಕೆಟಿಸಿಡಿಎಗೆ ಸಲ್ಲಿಸಿವೆ. ಇದರಲ್ಲಿ ಒತ್ತುವರಿ ಆಗಿದೆಯೇ? ಇಲ್ಲವೇ? ಎಂದು ಸ್ಪಷ್ಟೀಕರಿ
ಸುವ ನಕ್ಷೆಯನ್ನು ನೀಡಿಲ್ಲ. ಕಲ್ಮಶದ ವಿವರಗಳಿಲ್ಲ. ಮಾಲಿನ್ಯದ ಪ್ರಮಾಣ ದೃಢೀಕರಿಸುವ ಪ್ರಯೋಗಾಲಯ ವರದಿಯನ್ನು ಕೆಟಿಸಿಡಿಎ ಕೇಳಿದೆ. ಇದನ್ನು ಸಲ್ಲಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ.
ಬೃಹತ್ ಕೆರೆಗಳಾದ ಜಿಗಣಿ (53 ಎಕರೆ) ಹಾಗೂ ಹಾರಗದ್ದೆ (75 ಎಕರೆ) ಕೆರೆಗಳ ಅಭಿವೃದ್ದಿಗೆ ಸಣ್ಣ ನೀರಾವರಿ ಇಲಾಖೆ ಸಲ್ಲಿಸಿದ್ದ ಡಿಪಿಆರ್ ಕೂಡ ವಾಪಸ್ಹೋಗಿದೆ. ‘ಗ್ರಾನೈಟ್ ಕೆಸರು’ ನಿರ್ವಹಣೆ, ಹಾರಗದ್ದೆ ಕೆರೆಯಲ್ಲಿ 2 ಎಕರೆ 20 ಗುಂಟೆ ಒತ್ತುವರಿ ತೆರವಿನ ಕ್ರಮದ ವಿವರ ಅದರಲ್ಲಿ ಇರಲಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ 20 ಕೆರೆಗಳಿಗೆ ಡಿಪಿಆರ್‌ಗಳು ಕೆಟಿಸಿಡಿಎಗೆ ಅನುಮೋದನೆಗೆ ಇತ್ತೀಚೆಗೆ ಬಂದಿದ್ದವು. ಅವೆಲ್ಲವು ವಾಪಸ್ ಆಗಿವೆ.
‘ಕೆರೆಗಳ ಅಭಿವೃದ್ಧಿ ಸಮಗ್ರವಾಗಿರಬೇಕು. ಡಿಪಿಆರ್‌ನಲ್ಲಿ ಎಲ್ಲ ವಿವರಗಳು ಇರಬೇಕು ಎಂಬುದು ಪ್ರಾಧಿಕಾರದ ನಿಯಮ. ಹೀಗಾಗಿ, ಒತ್ತುವರಿ, ಕಲ್ಮಶ ಸೇರ್ಪಡೆ ಮತ್ತಿತರ ವಿವರಗಳನ್ನು ಒದಗಿಸದ್ದರಿಂದ ವಾಪಸು ಕಳುಹಿಸಲಾಗಿದೆ. ಸಮಗ್ರವಾಗಿದ್ದರಷ್ಟೇ ಒಪ್ಪಿಗೆ ನೀಡಲಾಗುತ್ತದೆ’ ಎಂದು ಕೆಟಿಸಿಡಿಎ ನಿರ್ದೇಶಕ ಶಿವಸ್ವಾಮಿ ಹೇಳಿದರು.
ಒತ್ತುವರಿ, ಕಲ್ಮಶ ತೆರವಾಗಲೇಬೇಕು...
‘ಬಿಬಿಎಂಪಿ ಸೇರಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಆಗಿರುವ, ಆಗುತ್ತಿರುವ ಕೆರೆಗಳಲ್ಲಿ ಒತ್ತುವರಿ ಇನ್ನೂ ಇದೆ. ಒಳಚರಂಡಿ ಹಾಗೂ ಇತರೆ ಕಲ್ಮಶ ಹರಿಯುವುದನ್ನು ತಡೆಯಲು ಈಗ ಅಭಿವೃದ್ಧಿ
ಕಾರ್ಯಕೈಗೊಂಡಿರುವ ಸಂಸ್ಥೆಗಳು ವಿಫಲವಾಗಿವೆ. ಪಂಚಾಯಿತಿ ಮಟ್ಟದಲ್ಲಿ ಹಲವು ಕೆರೆಗಳು ಡಿಪಿಆರ್ ಇಲ್ಲದೇ ಅಭಿವೃದ್ಧಿಯಾಗಿವೆ. ಯಾವುದೇ ಕೆರೆ ಅಭಿವೃದ್ಧಿ ಕಾಮಗಾರಿಗೆ ಮುನ್ನ ಅದರ ವ್ಯಾಪ್ತಿ ರಕ್ಷಣೆಯಾಗಬೇಕು. ಅದರ ವಿವರಗಳು ಇರಬೇಕು. ಕಲ್ಮಶ, ಒಳಚರಂಡಿನೀರು ಹರಿಯದಂತೆ ತಡೆಯಲು ಕೈಗೊಳ್ಳುವ ಕಾರ್ಯಗಳೇನು ಎಂದು ಡಿಪಿಆರ್‌ನಲ್ಲೇ ವಿವರಿಸಬೇಕು. ಅದರಂತೇ ಅಭಿವೃದ್ಧಿ ಕಾರ್ಯ ನಡೆಯಬೇಕು’ ಎಂದು ಫ್ರೆಂಡ್ಸ್ಆಫ್ ಲೇಕ್‌ನ ರಾಮ್‌ಪ್ರಸಾದ್ ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.