ಬೆಂಗಳೂರು: ‘ಸಾರ್ವಜನಿಕರು ಬಯಸಿದಂತೆ ಲಾಲ್‌ಬಾಗ್ ಅಭಿವೃದ್ಧಿಗೆ ಜಿಬಿಎ ವತಿಯಿಂದ ₹10 ಕೋಟಿ ಅನುದಾನ ನೀಡಲಾಗುವುದು. ಸುರಂಗ ರಸ್ತೆಗೆ ಲಾಲ್‌ಬಾಗ್ ಬಂಡೆಯ ಪಕ್ಕದಲ್ಲಿ ಪ್ರವೇಶ ನೀಡಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಆ ಜಾಗವನ್ನು ಪರಿಶೀಲಿಸಿ, ಅಗತ್ಯವಿದ್ದರೆ ಯೋಜನೆಯಲ್ಲಿ ಮಾರ್ಪಾಡು ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಶನಿವಾರ ಮುಂಜಾನೆ ಲಾಲ್‌ಬಾಗ್ ಉದ್ಯಾನದಲ್ಲಿ ‘ಬೆಂಗಳೂರು ನಡಿಗೆ’ ನಡೆಸಿ ಜನರ ಅಹವಾಲು, ಸಲಹೆಗಳನ್ನು ಸ್ವೀಕರಿಸಿ, ಸುರಂಗ ರಸ್ತೆಗೆ ಪ್ರವೇಶ ಸ್ಥಳವನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
‘ಲಾಲ್‌ಬಾಗ್ ಸಾರ್ವಜನಿಕರ ಆಸ್ತಿ. ಅದನ್ನು ಉಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಆರು ಎಕರೆ ಭೂಮಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ಅರ್ಧ ಎಕರೆ ಪ್ರದೇಶದಲ್ಲಿ ಅಶೋಕ ಪಿಲ್ಲರ್ ಕಡೆ ಸುರಂಗ ರಸ್ತೆಗೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗುವುದು. ಪಾರ್ಕಿಂಗ್‌ಗಾಗಿ ಇರುವ ಜಾಗದಲ್ಲಿ ಒಂದು ಎಕರೆ ಜಾಗವನ್ನು ಸ್ಟೋರೇಜ್‌ಗೆ ಬಳಸಿಕೊಳ್ಳುತ್ತೇವೆ. ನಂತರ ಅದನ್ನು ತೆರವುಗೊಳಿಸಿ ಲಾಲ್‌ಬಾಗ್‌ಗೆ ನೀಡಲಾಗುವುದು. ಸಣ್ಣ ಗಿಡಗಳನ್ನು ತೆರವುಗೊಳಿಸಿ, ಮತ್ತೆ ಗಿಡ ನೆಡುತ್ತೇವೆ. ಉಳಿದಂತೆ ಲಾಲ್‌ಬಾಗ್ ಉದ್ಯಾನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.
‘ಬೆಂಗಳೂರಿನಲ್ಲಿ ಅವಕಾಶ ಇರುವೆಡೆ ಲಾಲ್‌ಬಾಗ್ ಮಾದರಿಯಲ್ಲಿ ವೃಕ್ಷವನ ಮಾಡಲು ಅರಣ್ಯ ಇಲಾಖೆ ಜೊತೆ ಚರ್ಚೆ ಮಾಡುತ್ತೇನೆ. ಅದಕ್ಕೆ ಆರ್ಥಿಕ ಬೆಂಬಲವನ್ನು ನೀಡಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಲಹೆ: ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಸಿ, ಸಿಸಿ ಸಮಸ್ಯೆ, ಕಸದ ಸಮಸ್ಯೆ ನಿವಾರಿಸಬೇಕು. ಶಾಲಾ ಮುಂಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬುದು ಸೇರಿದಂತೆ ಅನೇಕ ಸಲಹೆಗಳನ್ನು ಆರ್.ಸಿ. ಜಗನ್ನಾಥ್, ಕಾರ್ತಿಕ್ ಕುಮಾರ್ ಸಹಿತ ಅನೇಕರು ನೀಡಿದರು.
ಸಾರ್ವಜನಿಕರ ಸಲಹೆ, ಮನವಿ ಹಾಗೂ ಅವರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ದಾಖಲು ಮಾಡಿಕೊಂಡರು.
ನಗರದ ರಸ್ತೆಗಳಲ್ಲಿ ಮೆಟ್ರೊ ಅಥವಾ ಯಾವುದೇ ಕಾಮಗಾರಿ ನಡೆದರೂ ಆ ಭಾಗದ ರಸ್ತೆಯನ್ನು ಯೋಜನೆ ಆರಂಭದಿಂದ ಅಂತ್ಯದವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು. ರಸ್ತೆ ಗುಂಡಿ ಬಿದ್ದರೂ ಅವರೇ ಮುಚ್ಚಿ ನಿರ್ವಹಣೆ ಮಾಡಬೇಕು ಎಂದು ರಾಜಾರಾಂ ಸಲಹೆ ನೀಡಿದರು.
ಜಯನಗರ 7 ‘ಬಿ’ ರಸ್ತೆಯಲ್ಲಿ ಬೀದಿ ದೀಪ ಇಲ್ಲದಿರುವ ಬಗ್ಗೆ ಸ್ಥಳೀಯ ನಿವಾಸಿ ಗಮನ ಸೆಳೆದರು. ಸೇಂಟ್ ಫ್ರಾನ್ಸಿಸ್ ಶಾಲೆ ಬಳಿಯ ರಸ್ತೆಯಲ್ಲಿ ಸಾರ್ವಜನಿಕರು ಕಸ ಸುರಿಯುತ್ತಿರುವ ಬಗ್ಗೆ, ರಸ್ತೆ ಹದಗೆಟ್ಟಿರುವ ಬಗ್ಗೆ ಶಿಕ್ಷಕಿ ಮಾಹಿತಿ ನೀಡಿದರು. ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಉಪಮುಖ್ಯಮಂತ್ರಿ ಭರವಸೆ ನೀಡಿದರು.
‘ನಾಗರಿಕರ ಸಲಹೆಗಳನ್ನು ಸ್ವೀಕರಿಸಲು, ಐದೂ ನಗರ ಪಾಲಿಕೆಗಳ ಉದ್ಯಾನಗಳಲ್ಲಿ ವಾರಾಂತ್ಯದಲ್ಲಿ ನಡಿಗೆ ಕಾರ್ಯಕ್ರಮವನ್ನು ನಡೆಸಲಿದ್ದೇನೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.