ADVERTISEMENT

ಕಲಾಸಂಘ ಹೊರಗಿಟ್ಟು ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ

ಲಾಲ್‌ಬಾಗ್‌: ತೋಟಗಾರಿಕೆ ಇಲಾಖೆಯ ನೇತೃತ್ವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 20:47 IST
Last Updated 10 ಡಿಸೆಂಬರ್ 2022, 20:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಹಲವು ದಶಕಗಳಿಂದ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿಕೊಂಡು ಬಂದಿರುವ ಮೈಸೂರು ಉದ್ಯಾನ ಕಲಾಸಂಘವನ್ನು ಹೊರಗಿಟ್ಟು, ತೋಟಗಾರಿಕೆ ಇಲಾಖೆಯ ನೇತೃತ್ವದಲ್ಲಿ 2023ರ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ ಆಯೋಜಿಸಲುನಿರ್ಧರಿಸಲಾಗಿದೆ.

‘ಈ ಬಾರಿಯ ಐತಿಹಾಸಿಕ ಫಲಪುಷ್ಪ ಪ್ರದರ್ಶನ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ‘ಕ್ರಿ.ಶ. 1500ರ ಬೆಂಗಳೂರು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಇದುವರೆಗಿನ ಬೆಂಗಳೂರಿನ ವಿಕಾಸ’ ಎಂಬ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಯೋಜಿಸಲು ತೋಟಗಾರಿಕೆ ಇಲಾಖೆ ಸಜ್ಜಾಗಿದೆ. ಇದರಲ್ಲಿ 15 ಲಕ್ಷದಿಂದ 20 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಗಾಜಿನ ಮನೆಯ ಸುತ್ತಮುತ್ತ ಬೆಂಗಳೂರಿನ ವಿವಿಧ ವಿಷಯಗಳ ಕುರಿತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್‌ ಕಟಾರಿಯಾ ತಿಳಿಸಿದರು.

ಸ್ವದೇಶಿ ತಳಿಗಳಿಗೆ ಹೆಚ್ಚಿನ ಆದ್ಯತೆ: ‘ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಪ್ರತಿ ಬಾರಿ ವಿದೇಶಿ ಹೂವುಗಳನ್ನು ಬಳಸಲಾಗುತ್ತಿತ್ತು. ಆದರೆ ಈ ಬಾರಿ ದೇಶದ ಈಶಾನ್ಯ ಮತ್ತು ಉತ್ತರದ ರಾಜ್ಯಗಳು ಸೇರಿ ಊಟಿ ಮತ್ತು ದಕ್ಷಿಣ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ವಿವಿಧ ತಳಿಗಳ ಹೂವುಗಳನ್ನು ಬಳಸಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ನ್ಯಾಯಾಂಗ ನಿಂದನೆ’

‘ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ಉದ್ಯಾನ ಕಲಾಸಂಘದ ಗುತ್ತಿಗೆ ಅವಧಿ ಮುಗಿದಿದೆ ಎಂಬ ಕಾರಣ ನೀಡಿ ಸಂಘಕ್ಕೆ ಏಕಾಏಕಿ ಬೀಗ ಹಾಕಲಾಗಿತ್ತು. ಸಂಘ ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ತಡೆಯಾಜ್ಞೆ ನೀಡಿದೆ. ಆದರೂ ನಮ್ಮ ಸಂಘವನ್ನು ಹೊರಗಿಟ್ಟು ಫಲಪುಷ್ಪ ಪ್ರದರ್ಶನ ಆಯೋಜಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದು ಸಂಘದ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.