ADVERTISEMENT

ಲಾಲ್‌ಬಾಗ್‌ ನವೀಕರಣ: ₹10 ಕೋಟಿ ಅನುದಾನ ಕೋರಿ ಜಿಬಿಎಗೆ ಪ್ರಸ್ತಾವ

₹10 ಕೋಟಿ ಅನುದಾನ ಕೋರಿ ಜಿಬಿಎಗೆ ಪ್ರಸ್ತಾವ

ಖಲೀಲಅಹ್ಮದ ಶೇಖ
Published 19 ಜನವರಿ 2026, 0:30 IST
Last Updated 19 ಜನವರಿ 2026, 0:30 IST
ಲಾಲ್‌ಬಾಗ್‌ ಉದ್ಯಾನವನ
ಲಾಲ್‌ಬಾಗ್‌ ಉದ್ಯಾನವನ   

ಬೆಂಗಳೂರು: ‘ಸಸ್ಯಕಾಶಿ’ ಲಾಲ್‌ಬಾಗ್‌ ಉದ್ಯಾನದ ನಡಿಗೆ ಪಥಗಳು, ಪಾದಚಾರಿ ಮಾರ್ಗದ ದುರಸ್ತಿ, ಮುಖ್ಯರಸ್ತೆಗಳ ಡಾಂಬರೀಕರಣ, ಬ್ಯಾಂಡ್‌ ಸ್ಟ್ಯಾಂಡ್‌ ಹಾಗೂ ಗುಲಾಬಿ ಉದ್ಯಾನದ ನವೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ₹10 ಕೋಟಿ ಅನುದಾನ ನೀಡುವಂತೆ ಕೋರಿ ತೋಟಗಾರಿಕೆ ಇಲಾಖೆಯು ಜಿಬಿಎಗೆ ಪ್ರಸ್ತಾವ ಸಲ್ಲಿಸಿದೆ. 

ದಶಕಗಳಿಂದ ದುರಸ್ತಿ ಕಾಣದ ಈ ನಡಿಗೆ ಪಥಗಳು ಕಿತ್ತು ಹೋಗಿ, ಸಾಲು ಸಾಲು ಗುಂಡಿಗಳು ಬಿದ್ದಿವೆ. ಪಾದಚಾರಿ ಮಾರ್ಗಗಳು ಸಮತಟ್ಟಾಗಿಲ್ಲದ ಕಾರಣ ವಾಯು ವಿಹಾರಿಗಳು, ಪ್ರವಾಸಿಗರು ನಡೆಯುವಾಗ ಎಲ್ಲಿ ಬೀಳುತ್ತೇವೋ ಎಂಬ ಆತಂಕದಲ್ಲೇ ಹೆಜ್ಜೆ ಹಾಕುತ್ತಾರೆ. ಮಳೆಗಾಲದಲ್ಲಂತೂ ಪಾದಚಾರಿ ಮಾರ್ಗಗಳೆಲ್ಲ ಜಾರು ಬಂಡಿಗಳಾಗುತ್ತವೆ. 

ಹದಗೆಟ್ಟಿರುವ ಪಾದಚಾರಿ ಮಾರ್ಗಗಳಲ್ಲಿಯೇ ವಾಯುವಿಹಾರಿಗಳು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತ್ಯೇಕ ಪಥ, ಕೆರೆಯ ಉದ್ದಕ್ಕೂ ಜಾಗಿಂಗ್ ಟ್ರ್ಯಾಕ್ ನಿರ್ಮಿಸಬೇಕು ಎಂದು ವಾಯುವಿಹಾರಿಗಳು ಇಟ್ಟಿದ್ದ ಬೇಡಿಕೆಗೆ ತೋಟಗಾರಿಕೆ ಇಲಾಖೆ ಸ್ಪಂದಿಸಿದೆ. 240 ಎಕರೆ ಪ್ರದೇಶದಲ್ಲಿ ಇರುವ ಲಾಲ್‌ಬಾಗ್‌ನ 8 ಕಿ.ಮೀ ನಡಿಗೆ ಪಥ, ಇದರ ಜೊತೆಗೆ ಪಾದಚಾರಿ ಮಾರ್ಗಗಳ ಅಭಿವೃದ್ಧಿ, 6.5 ಕಿ.ಮೀ ರಸ್ತೆಗೆ ಡಾಂಬರೀಕಣ ಮಾಡಲು ಯೋಜನೆ ರೂಪಿಸಿದೆ.  

ADVERTISEMENT

‘ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲಾಲ್‌ಬಾಗ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ  ‘ಸಾರ್ವಜನಿಕರು ಬಯಸಿದಂತೆ ಲಾಲ್‌ಬಾಗ್ ಅಭಿವೃದ್ಧಿಗೆ ಜಿಬಿಎ ವತಿಯಿಂದ ₹ 10 ಕೋಟಿ  ಅನುದಾನ ನೀಡಲಾಗುವುದು ಎಂದಿದ್ದರು. ಲಾಲ್‌ಬಾಗ್‌ನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಿಬಿಎಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.  

ಲಾಲ್‌ಬಾಗ್‌ನ ಆಕರ್ಷಣೀಯ ಕೇಂದ್ರಗಳಲ್ಲಿ ಒಂದಾಗಿರುವ ಗಾಜಿನ ಮನೆಯ ಮುಂಭಾಗದಲ್ಲಿರುವ ವಾದ್ಯ ರಂಗಮಂಟಪದಲ್ಲಿ (ಬ್ಯಾಂಡ್‌ ಸ್ಟ್ಯಾಂಡ್‌) ಬಿರುಕು ಬಿಟ್ಟಿತ್ತು. ಇದನ್ನು ತೆರವುಗೊಳಿಸಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ₹4 ಕೋಟಿ ವೆಚ್ಚದಲ್ಲಿ ಬ್ಯಾಂಡ್‌ ಸ್ಟ್ಯಾಂಡ್‌ ಪುನರ್‌ ನಿರ್ಮಿಸಲಾಗುವುದು. ಇದರ ಸೌಂದರ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನ ಮರ ವಿಜ್ಞಾನ ಸಂಶೋಧನಾ ಸಂಸ್ಥೆ ಹಾಗೂ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.  

‘ಬ್ರಿಟಿಷರು 1860ರಲ್ಲಿ ಲಾಲ್‍ಬಾಗ್‍ನಲ್ಲಿ ಬ್ಯಾಂಡ್ ಸ್ಟ್ಯಾಂಡ್ ಪ್ರಾರಂಭಿಸಿದರು. ಇಲ್ಲಿ ವಾರಕ್ಕೊಂದು ಬಾರಿ ಇಂಗ್ಲಿಷ್ ವಾದ್ಯ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. 2000ರಲ್ಲಿ ತೇಗದ ಮರದಿಂದ (ಟೀಕ್‌ವುಡ್‌) ಬ್ಯಾಂಡ್‌ ಸ್ಟ್ಯಾಂಡ್‌ ಅನ್ನು ಪುನರ್‌ ನಿರ್ಮಿಸಲಾಗಿತ್ತು. ಇದರ ಮೇಲ್ಚಾವಣಿಯನ್ನು ಮರದ ಹಲಗೆಗಳಿಂದ ನಿರ್ಮಿಸಲಾಗಿತ್ತು. ಮಳೆ–ಗಾಳಿಗೆ ಮೇಲ್ಚಾವಣಿ ಸೋರಲು ಪ್ರಾರಂಭಿಸಿತು. ಮೇಲ್ಚಾವಣಿಯಲ್ಲಿ ಮಳೆ ನೀರು ಸಂಗ್ರಹಗೊಂಡ ಪರಿಣಾಮ ಬಿರುಕು ಬಿಟ್ಟು ಹಾಳಾಗಿದೆ. ಈಗ ಪುನರ್‌ ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದು ವಿವರಿಸಿದರು. 

‘ಲಾಲ್‌ಬಾಗ್‌ಗೆ ಹೊಸ ಸಸ್ಯ ಪ್ರಬೇಧಗಳನ್ನು ಪರಿಚಯಿಸುವುದು. ಮೂರು ಶುದ್ಧ ಕುಡಿಯುವ ನೀರಿನ ಘಟಕಗಳು, ಮಳೆಯಿಂದ ಆಶ್ರಯ ಪಡೆಯಲು ತಂಗುದಾಣ ಹಾಗೂ ಕಾಂಪೌಂಡ್‌ಗೆ ಗ್ರಿಲ್‌ ಅಳವಡಿಸುವುದರ ಜೊತೆಗೆ ಎಲೆಕ್ಟ್ರಿಕ್‌ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ’ ಎಂದರು. 

ಲಾಲ್‌ಬಾಗ್‌ ಆವರಣದಲ್ಲಿರುವ ಗುಲಾಬಿ ಉದ್ಯಾನವನ್ನು ₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಈ ಕುರಿತು ರೂಪರೇಷಗಳನ್ನು ಸಿದ್ಧಪಡಿಸಲಾಗುತ್ತಿದೆ
-ಎಂ. ಜಗದೀಶ್, ತೋಟಗಾರಿಕೆ ಇಲಾಖೆ ಜಂತಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.