ADVERTISEMENT

ಸಸ್ಯಕಾಶಿ: ಪಕ್ಷಿಗಳ ವೀಕ್ಷಣೆಗೆ ಟೆಲಿಸ್ಕೋಪ್‌!

ರಾಜ್ಯದ ವಿವಿಧ ಉದ್ಯಾನ, ನರ್ಸರಿಗಳಿಂದ 600 ತಾವರೆ ಬಳ್ಳಿ ತರಿಸಿದ ಇಲಾಖೆ

ಕಲಾವತಿ ಬೈಚಬಾಳ
Published 30 ಆಗಸ್ಟ್ 2018, 19:56 IST
Last Updated 30 ಆಗಸ್ಟ್ 2018, 19:56 IST
ಲಾಲ್‌ಬಾಗ್‌ ಕೆರೆಯ ಸೇತುವೆ ಮುಂಭಾಗದ ಗೋಡೆಯನ್ನು ಪುನರ್‌ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿದೆ – ಪ್ರಜಾವಾಣಿ ಚಿತ್ರ: ಚಂದ್ರಹಾಸ ಕೋಟೇಕಾರ್‌
ಲಾಲ್‌ಬಾಗ್‌ ಕೆರೆಯ ಸೇತುವೆ ಮುಂಭಾಗದ ಗೋಡೆಯನ್ನು ಪುನರ್‌ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿದೆ – ಪ್ರಜಾವಾಣಿ ಚಿತ್ರ: ಚಂದ್ರಹಾಸ ಕೋಟೇಕಾರ್‌   

ಬೆಂಗಳೂರು: ಹಕ್ಕಿಗಳ ಹಾರಾಟ, ಮರಗಳ ಮೇಲೆ ನಡೆಯುವ ಅವುಗಳ ಚಟುವಟಿಕೆ, ಕೆರೆಯ ನಡುವಿನ ರಮ್ಯ ಸೌಂದರ್ಯವನ್ನು ಹತ್ತಿರದಿಂದ ನೋಡುವುದೆಂದರೆ ಒಂದು ರೋಮಾಂಚನಕಾರಿ ಅನುಭವವಲ್ಲವೇ?

ಅಂಥದ್ದೊಂದು ಅವಕಾಶ ಪಕ್ಷಿಪ್ರಿಯರಿಗೆ ಶೀಘ್ರವೇ ಲಾಲ್‌ಬಾಗ್‌ನಲ್ಲಿ ಲಭ್ಯವಾಗಲಿದೆ.

ಉದ್ಯಾನದ ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುವ ಪರಿಸರ ಪ್ರೇಮಿಗಳಿಗೆ ತೋಟಗಾರಿಕೆ ಇಲಾಖೆಯು ಸದ್ಯ ‘ವ್ಯೂವ್‌ ಪಾಯಿಂಟ್‌’ ನಿರ್ಮಿಸಲು ಮುಂದಾಗಿದೆ. ಅಲ್ಲದೆ, ಪಕ್ಷಿಗಳ ವೀಕ್ಷಣೆಗೆ ಟೆಲಿಸ್ಕೋಪ್‌ಗಳ ವ್ಯವಸ್ಥೆಯನ್ನೂ ಮಾಡಲು ನಿರ್ಧರಿಸಿದೆ.

ADVERTISEMENT

ವ್ಯೂವ್‌ ಪಾಯಿಂಟ್‌ನಲ್ಲಿ ಪಕ್ಷಿಗಳ ವೀಕ್ಷಣೆಗಾಗಿ ಮೂರರಿಂದ ನಾಲ್ಕು ಟೆಲಿಸ್ಕೋಪ್‌ಗಳನ್ನು ಇರಿಸುವ ಉದ್ದೇಶ ಇದೆ.ಏಕಕಾಲದಲ್ಲಿ ಸುಮಾರು 50ರಿಂದ 75 ಜನ ಒಟ್ಟಿಗೆ ಸೇರಿ ಕೆರೆಯ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್‌.

150 ಅಡಿ ದೂರದಲ್ಲಿದ್ದರೂ ಸುಮಾರು 25ರಿಂದ 30 ಜಾತಿಯ ಪಕ್ಷಿ ಸಂಕುಲಗಳ ಚಟುವಟಿಕೆಗಳನ್ನು ಅತಿ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದ್ದು, ಪಕ್ಷಿಗಳ ಕುರಿತು ಅಧ್ಯಯನ ನಡೆಸುವವರಿಗೆ ಇದರಿಂದ ಅನುಕೂಲವಾಗಲಿದೆ.

ಕೆರೆಯಲ್ಲಿ ಕಮಲ: ‘ಚಿಕ್ಕ ಕೆರೆ, ನಯಾಗರ ಜಲಪಾತದಸೌಂದರ್ಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ 15 ವಿವಿಧ ಬಣ್ಣಗಳ ತಾವರೆ ಜಾತಿಯ ನಿಂಫಿಯಾ ಬಳ್ಳಿಗಳನ್ನು ಬೆಳೆಸುವ ಕಾರ್ಯ ನಡೆದಿದೆ. ಈ ಮೂಲಕ ಕೆರೆ ಪ್ರದೇಶ, ಉದ್ಯಾನದ ಅತ್ಯಂತ ಆಕರ್ಷಣೀಯ ತಾಣವನ್ನಾಗಿ ಮಾಡುವ ಉದ್ದೇಶವಿದೆ’ ಎಂದು ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್‌ ಹೇಳುತ್ತಾರೆ.

‘ಸುಮಾರು ₹3 ಲಕ್ಷ ವೆಚ್ಚದಲ್ಲಿ ರಾಜ್ಯದ ವಿವಿಧ ಉದ್ಯಾನ, ನರ್ಸರಿಗಳಿಂದ 600 ತಾವರೆ ಬಳ್ಳಿಗಳನ್ನು ತರಿಸಲಾಗಿದೆ. ಈ ವಾರಾಂತ್ಯದಲ್ಲಿ ಅವುಗಳನ್ನು ನೆಡುವ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ವಿವರಿಸುತ್ತಾರೆ.

ರಕ್ಷಣೆಗಾಗಿ ಗ್ರಿಲ್‌: ಲಾಲ್‌ಬಾಗ್‌ನ ಸೇತುವೆ ಗೋಡೆ ನಿರ್ಮಾಣವಾದ ನಂತರವಿಧಾನಸೌಧದ ಮುಂಭಾಗ ಇರುವ ಗ್ರಿಲ್‌ಗಳ ಮಾದರಿಯಲ್ಲೇ ಇಲ್ಲಿನ ಪಾದಚಾರಿ ಮಾರ್ಗಕ್ಕೆ ರಕ್ಷಣಾ ದೃಷ್ಟಿಯಿಂದ ಗ್ರಿಲ್‌ಗಳನ್ನು ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.