ಕರ್ನಾಟಕ ಜನಮುಖಿ ಚಿಂತಕರು ಮತ್ತು ಸಾಂಸ್ಕೃತಿಕ ದನಿಗಳ ವೇದಿಕೆ ಬುಧವಾರ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆಯೋಜಿಸಿದ್ದ ಕರ್ನಾಟಕದ ಸಮತೋಲನ ಅಭಿವೃದ್ಧಿಗೆ ಸಮಗ್ರ ಭೂ ಸ್ವಾಧೀನ ನೀತಿ, ನಿಲುವುಗಳು’ ಕುರಿತ ಸಂವಾದ
ಬೆಂಗಳೂರು: ‘ರಾಜ್ಯದಲ್ಲಿ ಸಮಗ್ರವಾದ ಭೂಸ್ವಾಧೀನ ನೀತಿಯನ್ನು ಕಾಲಮಿತಿಯೊಳಗೆ ಜಾರಿಗೊಳಿಸಬೇಕು. ಅಲ್ಲಿಯವರೆಗೂ ಹೊಸದಾಗಿ ಭೂಸ್ವಾಧೀನಕ್ಕೆ ಅವಕಾಶ ನೀಡಬಾರದು’ ಎಂದು ಬುಧವಾರ ಇಲ್ಲಿ ಆಗ್ರಹಿಸಲಾಯಿತು.
ಕರ್ನಾಟಕ ಜನಮುಖಿ ಚಿಂತಕರು ಮತ್ತು ಸಾಂಸ್ಕೃತಿಕ ದನಿಗಳ ವೇದಿಕೆ ನಗರದಲ್ಲಿ ಹಮ್ಮಿಕೊಂಡಿದ್ದ ‘ಕರ್ನಾಟಕದ ಸಮತೋಲನ ಅಭಿವೃದ್ಧಿಗೆ ಸಮಗ್ರ ಭೂಸ್ವಾಧೀನ ನೀತಿ ನಿಲುವುಗಳು’ ಕುರಿತ ಚಿಂತನಾ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದ ಬಳಿಕ, ಮೂರು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.
ದೇವನಹಳ್ಳಿ, ಆನೇಕಲ್, ನೆಲಮಂಗಲ, ಬಿಡದಿ, ಬಳ್ಳಾರಿ, ಕಲಬುರಗಿ, ಮೈಸೂರು ಸೇರಿದಂತೆ ಹಲವು ಕಡೆ ನಡೆದಿರುವ ಕೃಷಿ ಜಮೀನುಗಳ ಸ್ವಾಧೀನ, ನಂತರದ ಬೆಳವಣಿಗೆಗಳ ಕುರಿತು ಹಲವರು ಪ್ರಸ್ತಾಪಿಸಿ, ‘ಭೂಮಿ ಕಳೆದುಕೊಂಡವರ ಬದುಕು ನರಕವಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಕೃಷಿ, ಕೈಗಾರಿಕೆ ಹಾಗೂ ಭೂಸ್ವಾಧೀನ ನೀತಿಗಳನ್ನು ಪೂರಕವಾಗಿ ರೂಪಿಸಬೇಕು’ ಎಂದು ಸಲಹೆ ನೀಡಿದರು.
ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸದ್ಯದಲ್ಲೇ ಭೇಟಿ ಮಾಡಿ ಭೂಸ್ವಾಧೀನ ನೀತಿಯ ರೂಪುರೇಷೆಗಳ ಕುರಿತು ಚರ್ಚಿಸಿ, ಹೊಸ ನೀತಿ ಜಾರಿಗೆ ಒತ್ತಡ ಹಾಕುವ ನಿರ್ಧಾರವನ್ನು ವೇದಿಕೆ ಸಂಚಾಲಕರಾದ ಪ್ರಕಾಶ್ ಕಮ್ಮರಡಿ ಪ್ರಕಟಿಸಿದರು.
‘ಕೃಷಿ, ಕೈಗಾರಿಕೆ ಮತ್ತು ನಗರೀಕರಣಕ್ಕೂ ಮಹತ್ವ ಕೊಡಬೇಕಿದೆ. ಆದರೆ, ಭೂ-ಸ್ವಾಧೀನ ಪ್ರಕ್ರಿಯೆ ಆರಂಭಿಸುವ ಮೊದಲು ಸರ್ಕಾರ ರೈತರೊಡನೆ ಸಮಾಲೋಚಿಸಿ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು’ ಎಂದು ಅತೀಕ್ ಸಲಹೆ ನೀಡಿದರು.
‘ಕೃಷಿಯಿಂದ ಜೀವನ ಕಟ್ಟಿಕೊಳ್ಳುವುದು ಕಷ್ಟಕರವಾಗುತ್ತಿದೆ ಎಂದು ಸ್ವತಃ ರೈತರೇ ತಮ್ಮ ಜಮೀನುಗಳನ್ನು ರಿಯಲ್ ಎಸ್ಟೇಟ್‌ನವರ ಕೈಗೆ ನೀಡುತ್ತಿದ್ದಾರೆ. ಇದು ನಿಲ್ಲಬೇಕು’ ಎಂದು ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಹೇಳಿದರು.
‘ಬಿಡದಿ ಭಾಗದಲ್ಲಿ ಮತ್ತೆ 9,500 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳುವ ಚಟುವಟಿಕೆಗಳನ್ನು ಸರ್ಕಾರ ಆರಂಭಿಸುತ್ತಿದೆ. ಕೆಐಎಡಿಬಿ ಬಳಿಕ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಇದಕ್ಕಾಗಿ ಬಳಸಿಕೊಳ್ಳುವ ಆತಂಕವಿದೆ’ ಎಂದು ಬಿಡದಿ ಭಾಗದ ರೈತರು ಆತಂಕ ವ್ಯಕ್ತಪಡಿಸಿದರು.
ಚರ್ಚೆಯಲ್ಲಿ ಕೆ.ಟಿ.ಗಂಗಾಧರ್, ವಿಜಯಮ್ಮ, ಶ್ರೀಪಾದ ಭಟ್, ತೇಜಸ್ವಿ ಪಟೇಲ್ ಅವರು, ಆಹಾರ ಭದ್ರತೆ, ಕೈಗಾರಿಕೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಹಕ್ಕೊತ್ತಾಯಗಳೇನು
* ರೈತರೊಂದಿಗೆ ಚರ್ಚಿಸಿ ಭೂ ಸ್ವಾಧೀನ ನೀತಿಯನ್ನು ಕಾಲಮಿತಿ ಒಳಗೆ ರೂಪಿಸಬೇಕು * ಕೆಐಎಡಿಬಿ ಸೇರಿದಂತೆ ಇತರೆ ಸಂಸ್ಥೆಗಳ ಮೂಲಕ ಇದುವರೆಗೆ ಕೈಗೊಂಡಿರುವ ಭೂಸ್ವಾಧೀನದ ಸಂಪೂರ್ಣ ವಿವರ, ಯಾವ ಉದ್ದೇಶಕ್ಕೆ ಬಳಕೆ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎನ್ನುವ ಕುರಿತು ಶ್ವೇತ ಪತ್ರ ಹೊರಡಿಸಬೇಕು. * ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಹಿಂದಿನ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಂದಿರುವ ಬದಲಾವಣೆಗಳನ್ನು ತಕ್ಷಣವೇ ಹಿಂಪಡೆಯಬೇಕು.
ಕೃಷಿಗೆ ಯೋಗ್ಯವಾದ ಜಮೀನು ಸ್ವಾಧೀನ ಮಾಡುತ್ತಾ ಹೋದರೆ ಆಹಾರಕ್ಕೆ ಹಾಹಾಕಾರದ ಸನ್ನಿವೇಶ ಬರಬಹುದು. 2013ರಲ್ಲಿ ಯುಪಿಎ ಸರ್ಕಾರ ಜಾರಿಗೊಳಿಸಿದ ಮಾಲೀಕರ ಅನುಮತಿ ಪಡೆದು ಸ್ವಾಧೀನ ಮಾಡಿಕೊಳ್ಳುವ ಕಾನೂನನ್ನು ಎಲ್ಲೆಡೆ ಜಾರಿಗೆ ತರಬೇಕು
-ಕೆ.ನಾರಾಯಣ ಗೌಡ ವಿಶ್ರಾಂತ ಕುಲಪತಿ
ಭೂಸ್ವಾಧೀನಕ್ಕಾಗಿ ಒಪ್ಪಂದ ಮಾಡಿಕೊಂಡರೂ ಅದು ನಿಗದಿತ ಉದ್ದೇಶ ಈಡೇರಿಸುವುದಿಲ್ಲ. ನೆರೆಯ ಆಂಧ್ರಪ್ರದೇಶದಂತೆ ನಮ್ಮಲ್ಲೂ ಬಂಜರು ಭೂಮಿಯನ್ನು ಕೈಗಾರಿಕೆಗಳಿಗೆ ನೀಡುವುದು ಹೆಚ್ಚಬೇಕು. -ಎಸ್.ಜಿ.ಸಿದ್ದರಾಮಯ್ಯ ಸಾಹಿತಿ
ಕೃಷಿ ಕೈಗಾರಿಕೆ ಹಾಗೂ ಭೂಸ್ವಾಧೀನ ನೀತಿಗಳನ್ನು ಒಂದಕ್ಕೊಂದು ಪೂರಕ ಎನ್ನುವಂತೆ ರೂಪಿಸಿದರೆ ಮಾತ್ರ ಉಳಿಗಾಲವಿದೆ. ಸರ್ಕಾರವೇ ತಪ್ಪು ಹೆಜ್ಜೆ ಇಟ್ಟಾಗ ಪ್ರಶ್ನಿಸಿ ಸರಿಯಾದ ನೀತಿ ರೂಪಿಸುವಂತೆ ಒತ್ತಾಯಿಸಬೇಕು
-ಬಡಗಲಪುರ ನಾಗೇಂದ್ರ ರೈತ ಸಂಘದ ನಾಯಕ
ಇಸ್ರೇಲ್‌ನಂತೆ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಉತ್ಪಾದನೆ ಹೆಚ್ಚಿಸುವ ಪ್ರಯತ್ನ ಆಗಬೇಕು. ಕೈಗಾರಿಕೆ ಹಾಗೂ ಕೃಷಿ ಸಮಾನಾಂತರವಾಗಿ ಬೆಳೆಯಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಬೇಕು.
- ಜೆ.ಕ್ರಾಸ್ತಾ ಉದ್ಯಮಿ
–––––––––
ಮಾದರಿ ನೀತಿ ರೂಪಿಸಲು ಸಕಾಲ: ಬಿ.ಆರ್.ಪಾಟೀಲ
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸ್ಪಷ್ಟ ನೀತಿ ಇಲ್ಲ ಗುರಿಯೂ ಇಲ್ಲ. ಮಾದರಿ ನೀತಿ ರೂಪಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ರಾಜ್ಯದ ನೀತಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಹೇಳಿದರು. ಸಭೆಯಲ್ಲಿ ಮಾತನಾಡಿದ ಅವರು ‘ಕರ್ನಾಟಕದ ಹಲವು ಭಾಗಗಳಲ್ಲಿ ಕೈಗಾರಿಕಾ ಉದ್ದೇಶಕ್ಕೆ ಜಮೀನು ವಶಪಡಿಸಿಕೊಂಡರೂ ಹೆಚ್ಚಿನ ಭಾಗ ಸೂಕ್ತ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ದೇವನಹಳ್ಳಿ ಸಮೀಪದ ಚನ್ನರಾಯಪಟ್ಟಣದ ರೈತರ ಹೋರಾಟ ಈಗ ಹೊಸ ದಿಕ್ಕು ತೋರಿಸಿದೆ’ ಎಂದು ಹೇಳಿದರು. ಕರ್ನಾಟಕದಲ್ಲಿ ನೀತಿ ಆಯೋಗ ಇದ್ದರೂ ಅದಕ್ಕೆ ಅಧಿಕಾರಗಳೇ ಇಲ್ಲ. ಜಿಲ್ಲಾ ಮಟ್ಟದಲ್ಲಿ ಯೋಜನಾ ಸಮಿತಿ ರಚಿಸಬೇಕು ಎಂದು ಇದೆ. ಆದರೆ ಆ ಕೆಲಸ ಆಗಿಲ್ಲ. ಸರ್ಕಾರವೆಂದರೆ ಹುಚ್ಚರ ಸಂತೆ ಎನ್ನುವಂತೆ ಆಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.