ADVERTISEMENT

ಜಿಂದಾಲ್‌ಗೆ ಜಮೀನು: ಸಚಿವ ಸಂಪುಟದಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 4:52 IST
Last Updated 31 ಅಕ್ಟೋಬರ್ 2019, 4:52 IST
ತೋರಣಗಲ್‌ ಸಮೀಪದ ವಿದ್ಯಾನಗರದ ಜಿಂದಾಲ್‌ ಆವರಣದಲ್ಲಿರುವ ಕಾರ್ಖಾನೆ ಕಟ್ಟಡ
ತೋರಣಗಲ್‌ ಸಮೀಪದ ವಿದ್ಯಾನಗರದ ಜಿಂದಾಲ್‌ ಆವರಣದಲ್ಲಿರುವ ಕಾರ್ಖಾನೆ ಕಟ್ಟಡ   

ಬೆಂಗಳೂರು: ಜಿಂದಾಲ್ ಕಂಪನಿಗೆ 3662 ಎಕರೆ ಜಮೀನು ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಇಲ್ಲಿ ಬುಧವಾರ ಹೇಳಿದರು.

‘ಕೈಗಾರಿಕಾ ಸಚಿವನಾಗಿದ್ದರೂ ಒಬ್ಬನೇ ನಿರ್ಧಾರ ಕೈಗೊಳ್ಳಲು ಸಾಧ್ಯ ಇಲ್ಲ. ಈ ಸಂಬಂಧ ಹಿಂದೆ ರಚನೆಯಾಗಿದ್ದ ಸಚಿವ ಸಂಪುಟ ಉಪಸಮಿತಿ ಸಹ ವರದಿ ಕೊಟ್ಟಿಲ್ಲ. ಮುಖ್ಯಮಂತ್ರಿ ಜತೆ ಚರ್ಚಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಹೊಸ ಕೈಗಾರಿಕಾ ನೀತಿಯ ಕರಡು ಸಿದ್ಧವಾಗಿದ್ದು, ಡಿಸೆಂಬರ್‌ನಲ್ಲಿ ಪ್ರಕಟಿಸಲಾಗುವುದು. ಹೊರ ರಾಜ್ಯಗಳ ಕೈಗಾರಿಕಾ ನೀತಿಯಲ್ಲಿ ಆಗಿರುವ ಬದಲಾವಣೆಗಳನ್ನೂ ಅಳವಡಿಸಿಕೊಳ್ಳಲಾಗುವುದು. ಬೆಂಗಳೂರಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳು ಬಂಡವಾಳ ತೊಡಗಿಸುತ್ತಿದ್ದು, ಎರಡನೇ ಹಂತದ ನಗರಗಳಿಗೂ ಮೂಲಸೌಕರ್ಯ ಕಲ್ಪಿಸಿ, ರಾಜ್ಯದ ಇತರೆಡೆಗಳಲ್ಲೂ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ADVERTISEMENT

‘ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ’ ಮಾದರಿಯಲ್ಲೇ ವಿಭಾಗ ಮಟ್ಟದಲ್ಲಿ ಅಲ್ಲಿನ ಅಧಿಕಾರಿಗಳಿಗೆ ಮತ್ತಷ್ಟು ಅಧಿಕಾರ ನೀಡಿ, ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳಲು ಅನುವು ಮಾಡಿಕೊಡಲಾಗುವುದು. ಹಿಂದುಳಿದ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಿಗೂ ಕೈಗಾರಿಕೆಗಳನ್ನು ಆಕರ್ಷಿಸಲು ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಚೀನಾ ಉದ್ಯಮಿಗಳ ಭೇಟಿ

ರಾಜ್ಯಕ್ಕೆ ಭೇಟಿನೀಡಿದ್ದ 18 ಕಂಪನಿಗಳ ಪ್ರಮುಖರ ನೇತೃತ್ವದ ಚೀನಾ ತಂಡದ ಜತೆ ಜಗದೀಶ ಶೆಟ್ಟರ್ ಚರ್ಚಿಸಿದರು. ರಾಜ್ಯದಲ್ಲಿ ಕೈಗಾರಿಕೆಗಳನ್ನು ತೆರಲು ಇರುವ ಅವಕಾಶಗಳು, ನಿಯಮಗಳು, ಭೂಮಿ, ವಿದ್ಯುತ್ ಸಂಪರ್ಕ ಮೊದಲಾದ ಸೌಕರ್ಯಗಳ ಬಗ್ಗೆ ನಿಯೋಗ ಮಾಹಿತಿ ಪಡೆದುಕೊಂಡಿತು.

ಉದ್ಯಮ ಸ್ಥಾಪನೆಗೆ ಇರುವ ಎಲ್ಲ ಅವಕಾಶಗಳ ಬಗ್ಗೆ ಚೀನಾ ಉದ್ಯಮಿಗಳಿಗೆ ಮಾಹಿತಿ ನೀಡಿದ್ದೇವೆ. ಬಂಡವಾಳ ತೊಡಗಿಸುವ ಬಗ್ಗೆ ಅವರು ಯಾವುದೇ ವಿವರ ನೀಡಿಲ್ಲ ಎಂದು ಶೆಟ್ಟರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.