
ಎಫ್‌ಐಆರ್
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಮಾಜಿ ಸಂಸದೆ ತೇಜಸ್ವಿನಿಗೌಡ ಅವರ ಸಹೋದರ ನಂಜೇಗೌಡ ಅವರ ನಿವೇಶನ ಕಬಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಿ.ಎಲ್. ಶ್ರೀರಮೇಶ್ ಅವರ ದೂರಿನ ಮೇರೆಗೆ ಆರ್.ಎಂ.ವಿ. ಎರಡನೇ ಹಂತ ನಾಗಶೆಟ್ಟಿಹಳ್ಳಿಯ ನಿವಾಸಿ ಎಂ.ನಾರಾಯಣಸ್ವಾಮಿ, ಎಂ. ಮುನಿರಾಜು, ಎಂ.ಮುನಿಸ್ವಾಮಿ, ಎಂ.ಮಮತಾ, ಎಸ್. ಸಂತೋಷ್ ಹಾಗೂ ಶ್ರೀಕಾಂತ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
‘ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಆರ್.ಎಂ.ವಿ ಎರಡನೇ ಹಂತ, ನಾಗಶೆಟ್ಟಿಹಳ್ಳಿಯ ಬಸವೇಶ್ವರ ಬಡಾವಣೆಯಲ್ಲಿ ಎ ಖಾತೆ ಹೊಂದಿರುವ ನಿವೇಶನವನ್ನು 2014ರಂದು ಪತ್ನಿ ತೇಜಸ್ವಿನಿಗೌಡ ಅವರಿಗೆ ದಾನವಾಗಿ ನೀಡಿದೆ. ನಂತರ ನನ್ನ ಪತ್ನಿ, ಅವರ ಸಹೋದರ ಎಂ.ನಂಜೇಗೌಡ ಅವರಿಗೆ ದಾನ ಪತ್ರದ ಮೂಲಕ ವರ್ಗಾಯಿಸಿದ್ದರು. ಅಂದಿನಿಂದ ಇಂದಿನವರೆಗೂ ನಿವೇಶನ ನನ್ನ ಕುಟುಂಬದವರ ಸ್ವಾಧೀನಾನುಭವದಲ್ಲಿದ್ದು, ಸಂಬಂಧಪಟ್ಟ ಪಾಲಿಕೆಗೆ ಕಂದಾಯ ಪಾವತಿ ಮಾಡಿಕೊಂಡು ಬಂದಿದ್ದೇವೆ’ ಎಂದು ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.
‘ಈ ನಿವೇಶನವನ್ನು ಕಬಳಿಸುವ ಉದ್ದೇಶದಿಂದ ನಾಗಶೆಟ್ಟಿಹಳ್ಳಿಯ ನಾರಾಯಣಸ್ವಾಮಿ, ಮುನಿರಾಜು, ಮುನಿಸ್ವಾಮಿ, ಮಮತಾ, ಸಂತೋಷ್, ಶ್ರೀಕಾಂತ್ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಗಂಗಾನಗರ ಉಪನೋಂದಣಾಧಿಕಾರಿ ಅವರು ಕಂದಾಯ ದಾಖಲೆ, ಆಧಾರ್ ಕಾರ್ಡ್, ವಂಶವೃಕ್ತ ಮತ್ತು ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳು, ವಿಭಾಗ ಪತ್ರವನ್ನು ಪಡೆಯದೆ ಸ್ವತ್ತನ್ನು 2025ರ ಜುಲೈ 9ರಂದು ನೋಂದಣಿ ಮಾಡಿಕೊಟ್ಟಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.