FIR
ಬೆಂಗಳೂರು: ಕಿರುತೆರೆ ಕಲಾವಿದರಿಗೆ ನಿವೇಶನ ನೀಡುವುದಾಗಿ ನಂಬಿಸಿ ಹಣ ಪಡೆದು, ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ಕೆಟಿವಿಎ) ಸದಸ್ಯೆ ಭಾವನಾ ಬೆಳಗೆರೆ ಅವರ ದೂರಿನ ಮೇರೆಗೆ ಎಎಸ್‌ಬಿ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್‌ನ ಎಸ್. ಭಗೀರಥ, ಇತರ ಆರೋಪಿಗಳಾದ ಸಂಜೀವ್ ತಗಡೂರು, ಎಂ. ಗುರುಪ್ರಸಾದ್, ಎನ್. ರವೀಂದ್ರ, ಎ.ಎನ್. ಉಮಾಕಾಂತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
‘ಕಿರುತೆರೆ ಕಲಾವಿದರು ಸೇರಿಕೊಂಡು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ (ಕೆಟಿವಿಎ) ರಚಿಸಿಕೊಂಡಿದ್ದೇವೆ. ಕೆಟಿವಿಎ ನಿವೇಶನ ಸಮಿತಿ ಸದಸ್ಯರಾದ ಸಂಜೀವ್ ತಗಡೂರು, ರವೀಂದ್ರ, ಉಮಾಕಾಂತ್ ಮತ್ತು ಗುರುಪ್ರಸಾದ್ ಅವರ ಮಾತು ನಂಬಿ 2012–13ರಲ್ಲಿ ನಿವೇಶನ ಖರೀದಿಸುವ ಸಲುವಾಗಿ ಎಎಸ್‌ಬಿ ಕಂಪನಿಯಲ್ಲಿ ಟಿ.ಎಲ್.ಶರತ್ ಚಂದ್ರ, ಟಿ.ಎಲ್.ರಾಹುಲ್ ಹಾಗೂ ನಾನು ಹಣ ಹೂಡಿಕೆ ಮಾಡಿದ್ಧೇವು. 2015ರಲ್ಲಿ ಭಗೀರಥ ಅವರು ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕರೆ ಗ್ರಾಮದ ನಿವೇಶನಗಳ ಶುದ್ಧ ಕ್ರಯವನ್ನು ರಾಜರಾಜೇಶ್ವರಿ ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಾಡಿದರು. ಬಳಿಕ ಖಾತಾಗಳನ್ನು ಖರೀದಿದಾರ ಹೆಸರಿಗೆ ವರ್ಗಾಯಿಸುವ ಸಂಬಂಧ ಕಂಪನಿ ಸದಸ್ಯರನ್ನು ಸಂಪರ್ಕಿಸಿದರೂ ಸಿಗಲಿಲ್ಲ. ಸಂಬಂಧಪಟ್ಟ ಇಲಾಖೆಯಲ್ಲಿ ವಿಚಾರಿಸಿದಾಗ ಸ್ವತ್ತು ನೋಂದಣಿ ಇಲ್ಲದಿರುವುದು ಗೊತ್ತಾಯಿತು’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ನಿವೇಶನ ಖರೀದಿಗಾಗಿ ಕೆಟಿವಿಎ ಸದಸ್ಯರಿಂದ ಹಣ ಪಡೆದುಕೊಂಡು, ₹1.6 ಕೋಟಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಮೋಸ ಮಾಡುವ ಉದ್ದೇಶದಿಂದ ಆರೋಪಿಗಳು ಬಡಾವಣೆಯ ನಕಲಿ ನಕ್ಷೆ, ದಾಖಲೆ ಸೃಷ್ಟಿಸಿದ್ದಾರೆ. ನಿವೇಶನ ಮಾರಾಟ ಮಾಡುವುದಾಗಿ 139 ಸದಸ್ಯರಿಂದ ಹಣ ಪಡೆದು ವಂಚಿಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.