ಸಾಂಕೇತಿಕ ಚಿತ್ರ
ಬೆಂಗಳೂರು: ಐದು ವಾರ್ಡ್ ಹಾಗೂ ಬೊಮ್ಮನಹಳ್ಳಿ ವಿಭಾಗದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿನ ಲೋಪಗಳ ಕುರಿತು ತನಿಖೆ ನಡೆಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ವಾರ್ಡ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಲೋಪಗಳಾಗಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಮನವಿಗಳು ಸಲ್ಲಿಕೆಯಾಗಿವೆ. ಈ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಏಳು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಿಇಒ ಹರೀಶ್ ಕುಮಾರ್ ಅವರು ಫೆಬ್ರುವರಿ 10ರಂದು ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ಫೆ. 10ರಂದು ಸಲ್ಲಿಸಿರುವ ನಾಲ್ಕು ಮನವಿಗಳನ್ನು ಪರಿಶೀಲಿಸಿ, ತನಿಖೆಗೆ ಸೂಚಿಸಲಾಗಿದೆ.
ಕೆ.ಆರ್. ಮಾರುಕಟ್ಟೆ ವಾರ್ಡ್‌ನಲ್ಲಿ ಘನತ್ಯಾಜ್ಯ ವಿಲೇವಾರಿ, ಸಂಗ್ರಹ ಮತ್ತು ಸಾಗಾಣಿಕೆಗೆ ಲವಕುಶ ಟ್ರಾನ್ಸ್‌ಪೋರ್ಟ್ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ. ಈ ಗುತ್ತಿಗೆದಾರರು ಮೂಲ ಉದ್ದೇಶದಂತೆ ಒಣಕಸ, ಹಸಿಕಸ ವಿಂಗಡಣೆ ಮಾಡದೆ, ತ್ಯಾಜ್ಯ ವಿಲೇವಾರಿ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ವಾಹನಗಳಿಗೆ ಆರ್‌ಎಫ್‌ಐಡಿ, ಜಿಪಿಎಸ್ ಯಂತ್ರವನ್ನೂ ಅಳವಡಿಸಿಲ್ಲ ಎಂದು ಸಾರ್ವಜನಿಕರು, ವಾರ್ಡ್ ವಾಟ್ಸ್ ಆ್ಯಪ್ ಗ್ರೂಪ್‌ನಿಂದ ದೂರುಗಳು ಬಂದಿದ್ದು, ಕಾನೂನು ರೀತಿ ನೋಟಿಸ್ ನೀಡಿ 2022ರ ಅಕ್ಟೋಬರ್ 16ರಿಂದ ಕಾರ್ಯಾದೇಶ ರದ್ದು ಮಾಡಲಾಗಿದೆ. ಇದನ್ನು ಮರೆಮಾಚಿ, ಗಿರಿನಗರ, ವಿದ್ಯಾಪೀಠ ವಾರ್ಡ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಕಾರ್ಯವನ್ನು ವಹಿಸಲಾಗಿದೆ.
ಹೊಸಕೆರೆಹಳ್ಳಿ ವಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ, ಸಂಗ್ರಹ ಮತ್ತು ಸಾಗಾಣಿಕೆಯನ್ನು ವಿಷನ್ ಮ್ಯಾನ್ ಪವರ್ ಸಂಸ್ಥೆಗೆ ನೀಡಲಾಗಿದ್ದು, ಮಾನವ ಸಂಪನ್ಮೂಲ, ವಾಹನ ಸಲಕರಣೆಗಳನ್ನು ಅವರು ಸರಬರಾಜು ಮಾಡಿಲ್ಲ. ಇವರ ಕಾರ್ಯಾದೇಶವನ್ನು 2014ರ ನವೆಂಬರ್ 3ರಂದು ರದ್ದು ಮಾಡಲಾಗಿದೆ. ಇದೇ ವಿಷನ್ ಸಂಸ್ಥೆಗೆ 183 ವಾರ್ಡ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆಯ ಕಾರ್ಯಾದೇಶವನ್ನು 2021ರ ಏಪ್ರಿಲ್ 26ರಂದು ನೀಡಲಾಗಿದೆ.
ಜಯನಗರ, ಜಕ್ಕಸಂದ್ರ, ಸಾರಕ್ಕಿ ವಾರ್ಡ್‌ಗಳಲ್ಲಿ ಎಸ್‌ಪಿಟಿ ಎಂಟರ್‌ಪ್ರೈಸಸ್ ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆಯನ್ನು 2021ರಲ್ಲಿ ಪಡೆದುಕೊಂಡಿದೆ. ಕಾರ್ಯಾದೇಶದಂತೆ ಕೆಲಸ ನಿರ್ವಹಿಸದೆ, ಹಿಂದಿನ ಸರಬರಾಜು ಆದೇಶ ಪ್ರಕಾರವೇ ಮೂರು ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸಿದ್ದು, ಹೆಚ್ಚುವರಿಯಾಗಿ ₹5.08 ಕೋಟಿ ಮೊತ್ತವನ್ನು ವಂಚಿಸಿರುತ್ತಾರೆ. ಅಲ್ಲದೆ, ನಿಯಮ ಉಲ್ಲಂಘಿಸಿ ಭದ್ರತಾ ಠೇವಣಿ, ಬ್ಯಾಂಕ್ ಖಾತರಿಯನ್ನು ಪಾಲಿಕೆ ಅಧಿಕಾರಿಗಳು ಹಿಂದಿರುಗಿಸಿದ್ದಾರೆ.
ಬೊಮ್ಮನಹಳ್ಳಿ ವಿಭಾಗ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯವನ್ನು ಅನ್ನಪೂರ್ಣೇಶ್ವರಿ ಅಸೋಸಿಯೇಟ್ಸ್ ಅವರಿಗೆ ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆ ನೀಡಲಾಗಿದೆ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಎಂಟು ವಾರ್ಡ್‌ಗಳ ಪೈಕಿ ಐದು ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಆರೂವರೆ ವರ್ಷಗಳಲ್ಲಿ ಸುಮಾರು ₹140 ಕೋಟಿಗೂ ಹೆಚ್ಚು ಹಣವನ್ನು ಪಾಲಿಕೆಯಿಂದ ಅವರು ಪಡೆದುಕೊಂಡಿದ್ದಾರೆ. ಕಾಂಪ್ಯಾಕ್ಟರ್, ಆಟೊ ಟಿಪ್ಪರ್‌ಗಳನ್ನು ನಿಗದಿತ ಸಂಖ್ಯೆಗೆ ಬದಲು ದುಪ್ಪಟ್ಟಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ, ದಾಖಲೆಯಲ್ಲಿ ತೋರಲಾಗಿರುವ ಮೂರನೇ ಒಂದರಷ್ಟು ಭಾಗದಷ್ಟು ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಎಲ್ಲ ವಾಹನಗಳಿಗೆ ಜಿಪಿಎಸ್, ಆರ್‌ಎಫ್‌ಐಡಿ ಅಳವಡಿಸಿಕೊಂಡು, ಪ್ರತಿನಿತ್ಯ ಅದನ್ನು ಸಂಬಂಧಿಸಿದ ಅಧಿಕಾರಿಗೆ ತಲುಪಿಸಬೇಕಿದೆ. ಆದರೆ, ಅನ್ನಪೂರ್ಣೇಶ್ವರಿ ಸಂಸ್ಥೆಯವರು ಒಂದು ಬಾರಿಯೂ ದಾಖಲೆ ನೀಡಿಲ್ಲ. ಹೀಗಿದ್ದರೂ, ಬೊಮ್ಮನಹಳ್ಳಿ ವಿಭಾಗದ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಪ್ರತಿ ತಿಂಗಳು ₹1.5 ಕೋಟಿ ಮೊತ್ತವನ್ನು ಈಗಲೂ ಪಾವತಿಸುತ್ತಿದ್ದಾರೆ.
ಹೀಗೆ ನಾಲ್ಕು ಮನವಿಗಳನ್ನು ಉಲ್ಲೇಖಿಸಿ, ತನಿಖೆ ನಡೆಸಬೇಕು ಎಂದು ಹರೀಶ್ ಕುಮಾರ್ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.