ADVERTISEMENT

ಬಿಟ್‌ ಕಾಯಿನ್ ದೋಚಲು ಬಳಸಿದ್ದ ಲ್ಯಾಪ್‌ಟಾಪ್ ನಾಪತ್ತೆ?

ಸಿಸಿಬಿ ಕಚೇರಿಯಲ್ಲಿ ಎಸಿಪಿ, ಇನ್‌ಸ್ಪೆಕ್ಟರ್‌ಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 20:19 IST
Last Updated 12 ಅಕ್ಟೋಬರ್ 2023, 20:19 IST
   

ಬೆಂಗಳೂರು: ಬಿಟ್ ಕಾಯಿನ್ ಅಕ್ರಮ ಪ್ರಕರಣದ ಪ್ರಮುಖ ಸಾಕ್ಷ್ಯ ಎನ್ನಲಾದ ಲ್ಯಾಪ್‌ಟಾಪ್‌ output: ನಪತ್ತೆಯಾಗಿದ್ದು, ಅದಕ್ಕಾಗಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.

‘ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಿದ್ದ ಸಿಸಿಬಿ ಅಧಿಕಾರಿಗಳು, ಆತನಿಗೆ ಬೇರೆ ವ್ಯಕ್ತಿಯೊಬ್ಬರ ಲ್ಯಾಪ್‌ಟಾಪ್‌ ಕೊಟ್ಟಿದ್ದರು. ಅದೇ ಲ್ಯಾಪ್‌ಟಾಪ್‌ ಬಳಸಿಕೊಂಡು ಶ್ರೀಕಿ, ಬಿಟ್ ಕಾಯಿನ್ ವರ್ಗಾವಣೆ ಮಾಡಿದ್ದನೆಂಬ ಮಾಹಿತಿ ಲಭ್ಯವಾಗಿದೆ’ ಎಂದು ಮೂಲಗಳು ಹೇಳಿವೆ.

‘ಬೇರೆ ವ್ಯಕ್ತಿಯ ಲ್ಯಾಪ್‌ಟಾಪ್ ಬಗ್ಗೆ ಸಿಸಿಬಿ ಅಧಿಕಾರಿಗಳು ಎಲ್ಲಿಯೂ ಮಾಹಿತಿ ಉಲ್ಲೇಖಿಸಿಲ್ಲ. ಇತ್ತೀಚೆಗೆ ಶ್ರೀಕಿ ಹಾಗೂ ಇತರರನ್ನು ವಿಚಾರಣೆ ನಡೆಸಿದಾಗ, ಈ ವಿಷಯ ಗೊತ್ತಾಗಿದೆ. ಹೀಗಾಗಿ, ಲ್ಯಾಪ್‌ಟಾಪ್ ಎಲ್ಲಿದೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಿಸಿಬಿ ಕಚೇರಿಯಲ್ಲಿ ವಿಚಾರಣೆ: ‘ಶ್ರೀಕಿ ಹಾಗೂ ಇತರರ ವಿರುದ್ಧ ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸಾಕ್ಷ್ಯ ನಾಶ ಮಾಡಿದ್ದ ಆರೋಪದಡಿ ಸಿಸಿಬಿಯ ತನಿಖಾಧಿಕಾರಿ ಸೇರಿ ಹಲವು ಅಧಿಕಾರಿಗಳ ವಿರುದ್ಧ ಈಗಾಗಲೇ ಕಾಟನ್‌ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಸಿಬಿ ಅಧಿಕಾರಿಗಳೇ, ಲ್ಯಾಪ್‌ಟಾಪ್‌ ನಾಶ ಮಾಡಿರುವ ಆರೋಪವಿದೆ’ ಎಂದು ಮೂಲಗಳು ಹೇಳಿವೆ.

‘ಬಿಟ್ ಕಾಯಿನ್ ಪ್ರಕರಣದ ತನಿಖೆ ಅವಧಿಯಲ್ಲಿ ಸಿಸಿಬಿಯಲ್ಲಿ ಕೆಲಸ ಮಾಡಿದ್ದ ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ ಅವರನ್ನು ಹಲವು ಬಾರಿ ವಿಚಾರಣೆ ಮಾಡಲಾಗಿದೆ. ಅವರಿಂದ ಲ್ಯಾಪ್‌ಟಾಪ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ, ಎಸಿಪಿ–ಇನ್‌ಸ್ಪೆಕ್ಟರ್‌ಗಳ ಸಮೇತ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಗುರುವಾರ ಹೋಗಿ ವಿಚಾರಣೆ ನಡೆಸಲಾಯಿತು’ ಎಂದು ತಿಳಿಸಿವೆ.

‘ಸಿಸಿಬಿ ತನಿಖಾ ತಂಡದಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ಎಸಿಪಿ–ಇನ್‌ಸ್ಪೆಕ್ಟರ್‌ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು. ಲ್ಯಾಪ್‌ಟಾಪ್‌ ಬಗ್ಗೆ ಮಾಹಿತಿ ಇಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದಾರೆ. ಎಲ್ಲರನ್ನೂ ಪುನಃ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಹೇಳಿವೆ.

ಹಣ ದೋಚಲು ಲ್ಯಾಪ್‌ಟಾಪ್‌ ಬಳಕೆ: ‘ಶ್ರೀಕಿ ಕಡೆಯಿಂದ 2 ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್ ಹಾಗೂ ಆ್ಯಪಲ್ ಮ್ಯಾಕ್‌ಬುಕ್‌ ಜಪ್ತಿ ಮಾಡಲಾಗಿತ್ತು. ಇವುಗಳನ್ನು ಬಳಸಿಕೊಂಡು ಬಿಟ್‌ ಕಾಯಿನ್ ವರ್ಗಾವಣೆ ಮಾಡಿಸಿಕೊಂಡರೆ, ಸಾಕ್ಷ್ಯ ಸಿಗುವ ಭಯ ಆರೋಪಿಗಳಿಗೆ ಇತ್ತು. ಇದೇ ಕಾರಣಕ್ಕೆ ವ್ಯಕ್ತಿಯೊಬ್ಬರ ಲ್ಯಾಪ್‌ಟಾಪ್ ಬಳಕೆ ಮಾಡಿರುವ ಅನುಮಾನವಿದೆ’ ಎಂದು ಮೂಲಗಳು ತಿಳಿಸಿವೆ.

‘ಬಿಟ್ ಕಾಯಿನ್‌ ರೂಪದಲ್ಲಿ ಹಣ ದೋಚುವ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿರುವ ಆರೋಪವಿದೆ. ಆದರೆ, ಲ್ಯಾಪ್‌ಟಾಪ್ ಸಿಗಬೇಕಿದೆ. ಸಿಕ್ಕ ಕೂಡಲೇ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಂದ ನಂತರ, ಬಿಟ್ ಕಾಯಿನ್ ವರ್ಗಾವಣೆ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಮೂಲಗಳು ಹೇಳಿವೆ.

‘ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಅಧಿಕಾರಿಗಳು, ಯಾವುದೇ ಕಾನೂನು ಕ್ರಮ ಜರುಗಿಸದೇ ಬಿಟ್ಟು ಕಳುಹಿಸಿದ್ದರು. ಈ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.