ADVERTISEMENT

ವ್ಯವಸ್ಥಾಪಕನ ಮೇಲೆ ಸಿಟ್ಟು: 8 ಲ್ಯಾಪ್‌ಟಾಪ್ ಕಳ್ಳತನ

​ಪ್ರಜಾವಾಣಿ ವಾರ್ತೆ
Published 28 ಮೇ 2022, 15:35 IST
Last Updated 28 ಮೇ 2022, 15:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆಲಸಕ್ಕಿದ್ದ ಕಂಪನಿ ವ್ಯವಸ್ಥಾಪಕನ ಮೇಲಿನ ಸಿಟ್ಟಿಗಾಗಿ, ಕಂಪನಿಯ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದ ಆರೋಪದಡಿ ಸಯ್ಯದ್ ಮೊಹಮ್ಮದ್ (30) ಎಂಬುವರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ಚಾಮರಾಜಪೇಟೆ ನಿವಾಸಿ ಸಯ್ಯದ್, ಕೋರಮಂಗಲ 5ನೇ ಹಂತದಲ್ಲಿರುವ ವೇಕ್‌ಫಿಟ್ ಇನೋವೇಷನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಂದ ₹ 2 ಲಕ್ಷ ಮೌಲ್ಯದ 8 ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಂಪನಿ ವ್ಯವಸ್ಥಾಪಕ, ಹೆಚ್ಚು ಕೆಲಸ ನಿರ್ವಹಿಸುವಂತೆ ಆರೋಪಿಗೆ ಹೇಳುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ವೈಷಮ್ಯ ಮೂಡಿತ್ತು. ವ್ಯವಸ್ಥಾಪಕನಿಗೆ ಬುದ್ಧಿ ಕಲಿಸಬೇಕೆಂದುಕೊಂಡಿದ್ದ ಆರೋಪಿ, ಪರಿಚಯಸ್ಥ ಬಾಲಕರ ಜೊತೆ ಸೇರಿ ಲ್ಯಾಪ್‌ಟಾಪ್‌ ಕಳ್ಳತನ ಮಾಡಿದ್ದ. ಲ್ಯಾಪ್‌ಟಾಪ್‌ ಕಳ್ಳತನ ಆರೋಪ ವ್ಯವಸ್ಥಾಪಕನ ಮೇಲೆ ಬರುವಂತೆ ಸಂಚು ರೂಪಿಸಿದ್ದ.’

ADVERTISEMENT

‘ಲ್ಯಾಪ್‌ಟಾಪ್ ಕಳ್ಳತನ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಂಪನಿ ಹಾಗೂ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ಆರೋಪಿ ಸಯ್ಯದ್ ಸುಳಿವು ಸಿಕ್ಕಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.