ಬೆಂಗಳೂರು: ವೀರಶೈವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರರ ಮೇಲೆ ಸರ್ಕಾರ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ ಎಂದು ವಿಭೂತಿಪುರ ವೀರಸಿಂಹಾಸನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹೋರಾಟ ಮಾಡುವ ಹಕ್ಕಿದೆ. ವೀರಶೈವ ಲಿಂಗಾಯತ ಸಮಾಜದಲ್ಲಿ ನೂರಕ್ಕೂ ಅಧಿಕ ಉಪಪಂಗಡಗಳಿವೆ. ಪಂಚಮಸಾಲಿ ಸಮಾಜದಲ್ಲಿ ಬಹುತೇಕರು ಕೃಷಿ ಕಾರ್ಮಿಕರು, ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಅಂತಹವರಿಗೆ ವಿದ್ಯಾಭ್ಯಾಸ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ದೊರೆಯಬೇಕೆಂಬ ಕಾರಣಕ್ಕಾಗಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸರ್ಕಾರ ಹೋರಾಟಗಾರರನ್ನು ಕರೆದು ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೇ ಹೊರತು ಹೋರಾಟವನ್ನು ಹತ್ತಿಕ್ಕುವುದು, ಹೋರಾಟಗಾರರ ಮೇಲೆ ಪ್ರಕರಣವನ್ನು ದಾಖಲಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದು ಬೇಸರ ಹೇಳಿದ್ದಾರೆ.
ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡದವರಿಗೂ ಕೇಂದ್ರದ ಒಬಿಸಿ ಮೀಸಲಾತಿ ದೊರೆಯಬೇಕೆಂಬ ಕೂಗು ಈ ಹಿಂದಿನಿಂದಲೂ ಇದೆ. ಅದಕ್ಕೂ ಸರ್ಕಾರ ಸ್ಪಂದಿಸಬೇಕು. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.