ADVERTISEMENT

‘ಕನ್ನಡ ಪುಸ್ತಕ ಹಬ್ಬ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 20:57 IST
Last Updated 1 ನವೆಂಬರ್ 2023, 20:57 IST
   

ಬೆಂಗಳೂರು: ‘ಕರ್ನಾಟಕ ರಾಜ್ಯವಾಗಿ ಸುವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ. ಆದರೆ, ಕರ್ನಾಟಕ ರಾಜ್ಯೋತ್ಸವ ಎಂದು ಹೇಳಿಕೊಳ್ಳಲು ಹಲವರು ಹಿಂಜರಿಯುತ್ತಿರುವುದು ನೆಲಕ್ಕೆ ಮಾಡುತ್ತಿರುವ ದ್ರೋಹ’ ಎಂದು ಸಂಸ್ಕಾರ ಭಾರತಿ ಪ್ರಾಂತ ಅಧ್ಯಕ್ಷ ಸುಚೇಂದ್ರ ಪ್ರಸಾದ್‌ ಹೇಳಿದರು.

’ರಾಷ್ಟ್ರೋತ್ಥಾನ ಸಾಹಿತ್ಯ’ ವತಿಯಿಂದ ಆಯೋಜಿಸಿರುವ ಒಂದು ತಿಂಗಳ ‘ಕನ್ನಡ ಪುಸ್ತಕ ಹಬ್ಬ’ಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕರ್ನಾಟಕವಾಗಿ 50 ವರ್ಷವಾದರೂ ಕನ್ನಡ ರಾಜ್ಯೋತ್ಸವ ಎಂದೇ ಹೇಳುತ್ತಿರುವುದು ಸರಿಯಲ್ಲ. ಪುಸ್ತಕ ಓದುವವರು, ಪ್ರಕಾಶಕರ ಸಂಖ್ಯೆ ಇಂದು ಕಡಿಮೆ ಆಗುತ್ತಿದೆ. ನಾಲ್ಕು ಕಿರು ಪುಸ್ತಕ ಓದಿ ನಾನೇನೋ ಅಧ್ಯಯನ ಮಾಡುತ್ತೇನೆ ಎನ್ನುತ್ತಾರೆ. ಅಧ್ಯಯನಶೀಲರಾಗಿ ಅನ್ವೇಷಣೆಗಾರರಾಗಬೇಕು’ ಎಂದರು

ADVERTISEMENT

‘ವಿಜಯ ಕರ್ನಾಟಕ’ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ‘ಪ್ರಜ್ಞಾಪ್ರವಾಹ’ ರಾಷ್ಟ್ರೀಯ ಸಹ– ಸಂಚಾಲಕ ರಘುನಂದನ್, ದಿನೇಶ್ ಹೆಗಡೆ ಇದ್ದರು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ‘ಸಂಸ್ಕೃತಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶಿಕ್ಷಣ ತಜ್ಞ ಗುರುರಾಜ ಕರಜಗಿ, ‘ಮತ್ತೊಬ್ಬರ ನೋವನ್ನು ತನ್ನದು ಎಂದು ಭಾವಿಸಿ, ಪರಿಹಾರ ನೀಡುವುದು ಸಂಸ್ಕೃತಿಯ ಮೂಲ ಲಕ್ಷಣ’ ಎಂದರು.

‘ಪ್ರೀತಿ, ಕರುಣೆ, ಆಂತಃಕರಣ ತೋರಿಸುವುದು. ಮತ್ತೊಬ್ಬರಿಗೆ ನೋವು ಉಂಟಾಗದಂತೆ ಮಾತನಾಡುವುದು. ನೋವನ್ನು ಹಂಚಿಕೊಳ್ಳುವುದೆಲ್ಲನ್ನೂ ಸೇರಿಸಿದರೆ ಅದೇ ಸಂಸ್ಕೃತಿ. ತುಂಬಾ ಕಲಿತವರಲ್ಲಿ ಸಂಸ್ಕೃತಿ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಕಲಿಯದವರೂ ಸಂಸ್ಕೃತಿಯಲ್ಲಿ ಶ್ರೀಮಂತರಾಗಿರುತ್ತಾರೆ’ ಎಂದರು.

ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಇದ್ದರು.

‘ಸಂಸ್ಕೃತಿ’ ಪುಸಕ್ತದಲ್ಲಿ ಸಾಹಿತಿಗಳಾದ ದೇವುಡು ನರಸಿಂಹಶಾಸ್ತ್ರಿ, ಕೆ.ಪಿ.ರಾಮನಾಥಯ್ಯ, ಬಿ.ಶಿವಮೂರ್ತಿ ಶಾಸ್ತ್ರಿ, ಎ.ಎನ್. ಮೂರ್ತಿರಾವ್‌, ಅ.ನ.ಕೃಷ್ಣರಾವ್‌, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಸಿ.ಕೆ.ವೆಂಕಟರಾಮಯ್ಯ ಅವರ ಲೇಖನಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.