ಬೆಂಗಳೂರು: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ಅವರನ್ನು ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಬನಶಂಕರಿ ಠಾಣಾ ವ್ಯಾಪ್ತಿಯ ರಾಘವೇಂದ್ರ ಲೇಔಟ್‌ನ ಮನೆಯಲ್ಲಿ ಮರಣ ಪತ್ರ ಬರೆದಿಟ್ಟು ನ.22ರಂದು ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಜೀವಾ ಬರೆದಿಟ್ಟಿದ್ದ ಮರಣ ಪತ್ರ ಆಧರಿಸಿ, ಅವರ ಸಹೋದರಿ ಸಂಗೀತಾ ಅವರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಅದಾದ ಮೇಲೆ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಹೈಕೋರ್ಟ್, ಸಿಬಿಐ ಅಧಿಕಾರಿಗಳನ್ನೂ ಒಳಗೊಂಡಂತೆ ಎಸ್‌ಐಟಿ ರಚಿಸಿತ್ತು. ಅವರು ತನಿಖೆ ಮುಂದುವರಿಸಿದ್ದರು.
‘ಪ್ರಕರಣದ ಸಂಬಂಧ ವಿಚಾರಣೆಗೆ ಬರುವಂತೆ ಕನಕಲಕ್ಷ್ಮಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಮಂಗಳವಾರ ವಿಚಾರಣೆಗೆ ಬಂದಿದ್ದರು. ವಿಚಾರಣೆ ವೇಳೆ ವಶಕ್ಕೆ ಪಡೆದು ಬಂಧಿಸಲಾಯಿತು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
‘ಕರ್ನಾಟಕ ಭೋವಿ ನಿಗಮ ಹಗರಣದ ಸಂಬಂಧ ವಿಚಾರಣೆ ವೇಳೆ ವಿವಸ್ತ್ರಗೊಳಿಸಿ ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ಜೀವಾ ಅವರು ಮರಣ ಪತ್ರದಲ್ಲಿ ಉಲ್ಲೇಖಿಸಿದ್ದರು. 13 ಪುಟಗಳ ಮರಣ ಪತ್ರ ಬರೆದಿಟ್ಟಿದ್ದರು. ಮರಣ ಪತ್ರವನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಅಲ್ಲದೇ ಮರಣ ಪತ್ರದ ನೈಜತೆ ತಿಳಿದುಕೊಳ್ಳಲು ಜೀವಾ ಅವರ ಕೈಬರಹವಿದ್ದ ಪತ್ರ ಹಾಗೂ ಮರಣ ಪತ್ರ ಎರಡನ್ನೂ ತನಿಖಾಧಿಕಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್) ರವಾನೆ ಮಾಡಿದ್ದರು.
ಏನಿದು ಹಗರಣ?: ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದಲ್ಲಿ ನಡೆದಿದ್ದ ಅಕ್ರಮ ಪ್ರಕರಣದ ತನಿಖೆಯನ್ನು ಕಾಂಗ್ರೆಸ್ ಸರ್ಕಾರವು ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ಅವರು ತನಿಖಾಧಿಕಾರಿ ಆಗಿದ್ದರು.
2018ರಿಂದ 2024ರವರೆಗೆ ಐದು ವರ್ಷಗಳಲ್ಲಿ ಸುಮಾರು ₹90 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಸಿಐಡಿ ಹೇಳಿತ್ತು.
ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ ಮನೆಯಲ್ಲಿ, ಉದ್ಯಮಿಯೂ ಆಗಿದ್ದ ವಕೀಲೆ ಜೀವಾ ಹಾಗೂ ಆಕೆಯ ಸಹೋದರಿ ಸಂಗೀತಾ ಬಾಡಿಗೆಗೆ ಇದ್ದರು. ಇದೇ ಮನೆಯನ್ನೇ ತಮ್ಮ ಸಹೋದರಿ ಸಂಗೀತಾ ಒಡೆತನದ ಹರ್ನಿತಾ ಕ್ರಿಯೇಷನ್ಸ್ ಕಂಪನಿಯ ಕಚೇರಿ ಎಂದು ಹೇಳಿಕೊಂಡು ಜೀವಾ ಹಣ ವರ್ಗಾವಣೆ ಮಾಡಿಕೊಂಡಿದ್ದರು ಎಂಬುದನ್ನು ತನಿಖಾ ತಂಡ ಪತ್ತೆ ಹಚ್ಚಿತ್ತು. ಅದಾದ ಮೇಲೆ ಜೀವಾ ಅವರನ್ನು ವಿಚಾರಣೆಗೆ ಕರೆಸಿ ಕಿರುಕುಳ ನೀಡಲಾಗಿತ್ತು ಎಂಬ ಆರೋಪವಿತ್ತು ಎಂದು ಮೂಲಗಳು ಹೇಳಿವೆ.
ಕನಕಲಕ್ಷ್ಮಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 (ಎ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108ರ ಅಡಿಯಲ್ಲಿ ಜೀವಾ ಅವರ ಸಹೋದರಿ ಸಂಗೀತಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.