
ಗುಲಾಬಿ..
ಬೆಂಗಳೂರು: ‘ಭಯ ಬಿಡಿ, ಪ್ರೀತಿ ಮಾಡಿ’ ಎನ್ನುವ ಪದಗಳು 'ಗಾಯ'ಗೊಂಡ ನಮ್ಮ ಹೃದಯಗಳಿಗೆ ಮದ್ದು ಹಾಗೂ ಮಾನವೀಯ ಸಂಬಂಧಗಳಿಗೆ ದಿಕ್ಸೂಚಿಯೂ ಹೌದು’ ಎಂದು ಪ್ರಾಧ್ಯಾಪಕ ಪ್ರೊ.ಡೊಮಿನಿಕ್ ಡಿ. ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಒಂದೆಡೆ ಸಂಸ್ಥೆ ಬೈಯಪ್ಪನಹಳ್ಳಿ ಮೆಟ್ರೊ ಸಮೀಪ ಶನಿವಾರ ಆಯೋಜಿಸಿದ್ದ ಲಿಂಗತ್ವ-ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ‘ಭಯ ಬಿಡಿ-ಪ್ರೀತಿ ಮಾಡಿ’ ಎಂಬ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ‘ಬದುಕಿನಲ್ಲಿ ಪ್ರೀತಿಯ ಗಾಳಿ ಬೀಸಿ, ಸಾಂತ್ವನದ ಕೈ ಚಾಚುವ, ನಮ್ಮೆಲ್ಲರ ಹೋರಾಟಗಳು ಬದುಕಿಗೆ ಖಂಡಿತವಾಗಿಯು ನಾಂದಿಯಾಗಲಿದೆ. ಆ ದಿಕ್ಕಿನತ್ತ ದಿಟ್ಟ ಹೆಜ್ಜೆಯಿಡೋಣ’ ಎಂದು ಆಶಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕಿ ಕೆ.ವಿದ್ಯಾಕುಮಾರಿ ಮಾತನಾಡಿ, ಪ್ರಸ್ತುತ ಸಂದರ್ಭಕ್ಕೆ ‘ಭಯ ಬಿಡಿ-ಪ್ರೀತಿ ಮಾಡಿ’ ಪರಿಕಲ್ಪನೆ ಸೂಕ್ತವಾಗಿದೆ. ಅಪನಂಬಿಕೆ ಮತ್ತು ದ್ವೇಷದಿಂದ ಮನುಷ್ಯರು ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಸ್ಪರ ಸಹಬಾಳ್ವೆ, ಪರಸ್ಪರ ಮಾನವೀಯ ನೆಲೆಯಲ್ಲಿ ಮನುಷ್ಯನನನ್ನು ಗುರುತಿಸುವಂತಾಗಬೇಕು. ಜಾತಿ, ಧರ್ಮ, ವರ್ಗ ಎನ್ನುವುದು ಮುಖ್ಯವಾಗಬಾರದು. ಅದೆಲ್ಲವನ್ನೂ ಬಿಟ್ಟು, ಮನುಷ್ಯನನ್ನಾಗಿ ಗುರುತಿಸುವುದು, ಗೌರವಿಸುವುದು ಮುಖ್ಯ. ಎಲ್ಲ ನಾಗರಿಕ ಮನಸ್ಸುಗಳನ್ನು ಬಡಿದೆಬ್ಬಿಸಲಿ, ಎಲ್ಲರ ಮನಸ್ಸುಗಳನ್ನು ಮನಃ ಪರಿವರ್ತನೆ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಲೇಖಕಿ ಡಾ.ಷಾಕಿರಾ ಖಾನಂ, ತಹಶೀಲ್ದಾರ್ ಪ್ರಶಾಂತ ಖಾನಗೌಡ ಪಾಟೀಲ, ಒಂದೆಡೆ ಸಂಸ್ಥೆಯ ಮುಖ್ಯಸ್ಥೆ ಅಕ್ಕೈ ಪದ್ಮಶಾಲಿ, ಸೌಮ್ಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.