ADVERTISEMENT

ಸಾಹಿತ್ಯವು ಪ್ರಜ್ಞೆಯ ಹಂತ ಎತ್ತರಿಸಲಿ: ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 14:51 IST
Last Updated 27 ಡಿಸೆಂಬರ್ 2025, 14:51 IST
ನಿರ್ಮಲಾನಂದನಾಥ ಸ್ವಾಮೀಜಿ
ನಿರ್ಮಲಾನಂದನಾಥ ಸ್ವಾಮೀಜಿ   

ಬೆಂಗಳೂರು: ‘ಜಾತಿ, ಧರ್ಮಗಳನ್ನು ಸೇರಿದಂತೆ ಎಲ್ಲ ತರಹದ ಭೇದಗಳು ಕೆಳಹಂತದಲ್ಲಿ ಮಾತ್ರ ಇರುತ್ತವೆ. ನಮ್ಮ ಪ್ರಜ್ಞೆ ಎತ್ತರಕ್ಕೆ ಹೋದ ಮೇಲೆ ಯಾವುದೇ ಭೇದ ಭಾವ ಇರುವುದಿಲ್ಲ. ಸಾಹಿತ್ಯವು ಪ್ರಜ್ಞೆಯನ್ನು ಎತ್ತರಿಸುವ ಕೆಲಸ ಮಾಡಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

70ನೇ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸಪ್ನ ಬುಕ್ ಹೌಸ್‌ ಶನಿವಾರ ಹಮ್ಮಿಕೊಂಡಿದ್ದ 70 ಕನ್ನಡ ಪುಸ್ತಕಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತನಗೆ ಎಂಥ ಸಮಾಜ ಬೇಕು ಎಂದು ದಾರ್ಶನಿಕ, ಬರಹಗಾರ ಬಯಸುತ್ತಾನೋ ಅಂಥದ್ದೇ ಸಾಹಿತ್ಯವನ್ನು ಸಮಾಜಕ್ಕೆ ನೀಡಬೇಕು. ಆಗ ಸಮಾಜದ ವಿಕಾಸ ಆಗಲು ಸಾಧ್ಯ. ಅಂಥ ಸಾಹಿತ್ಯ ನಮ್ಮನ್ನು ತಟ್ಟಲು ಸಾಧ್ಯ’ ಎಂದು ತಿಳಿಸಿದರು.

ADVERTISEMENT

ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ್‌ ಮಾತನಾಡಿ, ‘ನಮ್ಮ ಬದುಕಿನಲ್ಲಿ ಪುಸ್ತಕಗಳು ವಹಿಸುವ ಪಾತ್ರ ಬಹಳ ದೊಡ್ಡದು. ದೇಹಕ್ಕೆ ಒಳ್ಳೆಯ ಆಹಾರ ಹೇಗೆ ಬೇಕೋ ಹಾಗೇ ಮನಸ್ಸಿಗೆ ಒಳ್ಳೆಯ ಪುಸ್ತಕಗಳ ಓದು ಬೇಕು. ಆಗ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯ. ಪುಸ್ತಕಗಳು ಇಲ್ಲದೇ ಹೋಗಿದ್ದರೆ ಮಾನವನ ಬದುಕು ಅಂಧಕಾರದಲ್ಲಿ ಮುಳುಗುತ್ತಿತ್ತು. ಜಗತ್ತಿನಲ್ಲಿ ಎಲ್ಲವೂ ನಾಶವಾಗಬಹುದು. ಅಕ್ಷರ, ಅದರಿಂದ ಮೂಡಿದ ಸಾಹಿತ್ಯ ನಾಶವಾಗದು’ ಎಂದು ಹೇಳಿದರು.

ಕೃತಿಗಳ ಬಗ್ಗೆ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಮಾತನಾಡಿ, ‘ಇಂದು ರಾಜ್ಯದ 31 ಜಿಲ್ಲೆಗಳ 70 ಸಾಹಿತಿಗಳ ಕೃತಿಗಳು ಬಿಡುಗಡೆಯಾಗಿವೆ. ಸಣ್ಣಕಥೆ, ವಿಮರ್ಶೆ, ಕಾವ್ಯ, ಆರೋಗ್ಯ, ಪ್ರವಾಸ ಕಥನ, ಲೇಖನ ಸಂಕಲನ, ವಿಜ್ಞಾನ, ನಾಟಕ, ಮಕ್ಕಳ ಸಾಹಿತ್ಯ ಸೇರಿದಂತೆ 25 ಸಾಹಿತ್ಯ ಪ್ರಕಾರಗಳ ಕೃತಿಗಳು ಇದರಲ್ಲಿ ಒಳಗೊಂಡಿವೆ’ ಎಂದರು.

ಸಾಹಿತ್ಯ ವಿದ್ವಾಂಸ ಹಂಪ ನಾಗರಾಜಯ್ಯ, ಪತ್ರಕರ್ತ ಗಿರೀಶ್‌ ರಾವ್‌ ಹತ್ವಾರ್‌, ಸಪ್ನ ಬುಕ್‌ ಹೌಸ್‌ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.