ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಇ.ಕೆ.ಎನ್. ರಾಜನ್, ವಿ. ರಾಮಮೂರ್ತಿ, ವಿ. ಗೋಪಾಲಗೌಡ, ಕೆ. ಷರೀಫಾ ಮತ್ತು ಅಶೋಕ್ ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಕಾರ್ಮಿಕ ಶಕ್ತಿಗಳೇ ಆಡಳಿತ ಮಾಡುವಂತಾಗಬೇಕಾದರೆ ಬಂಡವಾಳಶಾಹಿಗಳಿಗೆ ಮತ ಹಾಕುವುದನ್ನು ನಿಲ್ಲಿಸಬೇಕು. ಕಾರ್ಮಿಕರನ್ನೇ ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು’ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ತಿಳಿಸಿದರು.
ಕರ್ನಾಟಕ ವರ್ಕರ್ಸ್ ಯೂನಿಯನ್ ಗುರುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕಾರ್ಮಿಕರಿಲ್ಲದೇ ಯಾವ ಮುಖ್ಯಮಂತ್ರಿಯೂ ಇಲ್ಲ, ಪ್ರಧಾನಿಯೂ ಇಲ್ಲ. ದೇಶವು ನಡೆಯುತ್ತಿರುವುದೇ ಕಾರ್ಮಿಕರು ಮತ್ತು ಕೃಷಿಕರಿಂದ. ಬಂಡವಾಳ ಹೂಡಿಕೆಯಷ್ಟೇ ಕಾರ್ಮಿಕ ಶಕ್ತಿಯೂ ಮುಖ್ಯ. ಹಾಗಾಗಿ ಬಂಡವಾಳಗಾರರ ಸಮಾನರಾಗಿ ಕಾರ್ಮಿಕರೂ ಇರಬೇಕು ಎಂದು ಪ್ರತಿಪಾದಿಸಿದರು.
ಗೌರಿ ಪೂಜೆ, ಸರಸ್ವತಿ ಪೂಜೆ, ಲಕ್ಷ್ಮೀ ಪೂಜೆ ಎಂದು ಮಹಿಳೆಯರನ್ನು ಪೂಜೆಗೆ ಸೀಮಿತಗೊಳಿಸಲಾಗಿದೆ. ಜನಸಂಖ್ಯೆಯ ಶೇಕಡ 50ರಷ್ಟು ಇರುವ ಮಹಿಳೆಯರಿಗೆ ಸಮಾನವಾದ ಅವಕಾಶವನ್ನು ನೀಡಿಲ್ಲ. ಸಂವಿಧಾನದಲ್ಲಿ ಸಮಾನತೆ ನೀಡಲಾಗಿದೆ. ಕಾರ್ಯರೂಪದಲ್ಲಿ ಸಮಾನತೆ ಇಲ್ಲ. ಮಹಿಳೆಯರು ಕಾರ್ಮಿಕ ಸಂಘಟನೆಗಳ ನಾಯಕರಾಗಬೇಕು. ಮಹಿಳೆಯರು ಆಡಳಿತ ನಡೆಸುವವರಾಗಬೇಕು. ಹೆಸರಿಗಷ್ಟೇ ರಾಜಕೀಯ ಪ್ರಾತಿನಿಧ್ಯ ನೀಡುವ ಬದಲು ಸಂಸತ್ತು, ವಿಧಾನಸಭೆಗಳಲ್ಲಿ ಶೇ 50ರಷ್ಟು ಮಹಿಳೆಯರು ಇರಬೇಕು ಎಂದು ಹೇಳಿದರು.
ಹಲವು ಕಾರ್ಮಿಕ ಸಂಘಟನೆಗಳಿವೆ. ಕಾರ್ಮಿಕರ ಬಗ್ಗೆ ನಿಜವಾದ ಕಳಕಳಿ ಇದ್ದರೆ ಎಲ್ಲ ಸಂಘಟನೆಗಳು ಒಗ್ಗೂಡಬೇಕು ಎಂದರು.
ಕರ್ನಾಟಕ ಚಲನಚಿತ್ರ ಕಾರ್ಮಿಕ ಸಂಘದ ಸ್ಥಾಪಕ ಅಧ್ಯಕ್ಷ ಅಶೋಕ್ ಮಾತನಾಡಿ, ‘ಚಲನಚಿತ್ರ ನಿರ್ಮಾಣ ಮಾಡುವ ಹಂತದಲ್ಲಿ ನಟ, ನಟಿಯರಿಗೆ ವೇತನ ಪಾವತಿಯಲ್ಲಿ ಅಷ್ಟಾಗಿ ಸಮಸ್ಯೆ ಆಗುವುದಿಲ್ಲ. ಆದರೆ, ಕಾರ್ಮಿಕರಿಗೆ ವೇತನ ಸರಿಯಾಗಿ ಪಾವತಿಯಾಗುತ್ತಿರಲಿಲ್ಲ. ಅದಕ್ಕಾಗಿ ಕಾರ್ಮಿಕರ ಸಂಘಟನೆ ಮಾಡಬೇಕಾಯಿತು. ಕಾರ್ಮಿಕ ಸಂಘ ಕಟ್ಟಿದ ಕಾರಣಕ್ಕೆ ನಿರ್ಮಾಪಕರು ನನಗೆ ನೀಡುವ ಅವಕಾಶವನ್ನು ಕಡಿಮೆ ಮಾಡಿದರು. ಆದರೆ, ದುಡಿಯುವ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ಸಿಗುವಂತಾಗಿರುವುದು ತೃಪ್ತಿ ನೀಡಿದೆ’ ಎಂದು ಹೇಳಿದರು.
‘ಒಂದು ದೇಶ, ಹಿಂದಿ ಒಂದೇ ಭಾಷೆ, ಒಂದೇ ಚುನಾವಣೆ ಎಂದು ಎಲ್ಲವನ್ನೂ ಒಂದೇ ಮಾಡುವ ಪ್ರಯತ್ನ ನಡೆಯುತ್ತಿದೆ. ನಾವು ಕನ್ನಡಿಗರು ಅವುಗಳನ್ನು ಒಪ್ಪಲು ಸಾಧ್ಯವಿಲ್ಲ. ನಮಗೆ ಕನ್ನಡವೇ ಮೊದಲು’ ಎಂದರು.
ಸಾಹಿತಿ ಕೆ. ಷರೀಫಾ ಮಾತನಾಡಿ, ‘ಕಾರ್ಮಿಕ ಕಾಯ್ದೆಗಳನ್ನೆಲ್ಲ ಇಲ್ಲವಾಗಿಸುವ ಕಾಲದಲ್ಲಿ ನಾವಿದ್ದೇವೆ. ನಾವು ಮೌನವಾಗಿದ್ದೇವೆ. ಸಂದರ್ಭ ಬಂದರೆ ನಾವು ಸಿಡಿದೇಳುವ ಸಿಂಹಗಳಾಗುತ್ತೇವೆ ಎಂಬುದು ಅವರಿಗೆ ಗೊತ್ತಿಲ್ಲ. ನಮ್ಮಲ್ಲಿ ಯಾರಿಗೂ ಯುದ್ಧ ಬೇಕಾಗಿಲ್ಲ. ಯುದ್ಧಕ್ಕಾಗಿ ಹಪಾಹಪಿಸುವವರು ನಾವಲ್ಲ’ ಎಂದರು.
ಯೂನಿಯನ್ ಉಪಾಧ್ಯಕ್ಷ ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್. ರಾಜನ್, ಜಂಟಿ ಕಾರ್ಯದರ್ಶಿ ಮೆಲ್ಕಿಯೋರ್ ಆರ್.ಡಿ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.