ಬೆಂಗಳೂರು: ‘ನಾರಾಯಣ ಗುರುಗಳ ಜೀವನ, ಸ್ವಾಮಿ ವಿವೇಕಾನಂದರ ಚಿಂತನಾಧಾರೆ ಮತ್ತು ಅಂಬೇಡ್ಕರ್ ಅವರ ಪ್ರಾಯೋಗಿಕ ಬದುಕಿನಿಂದ ಯುವವಾಹಿನಿ ಸಂಘಟನೆಯು ಪ್ರೇರಣೆ ಪಡೆದು, ಮುನ್ನಡೆದರೆ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯ’ ಎಂದು ಮಂಗಳೂರು ಕುದ್ರೋಳಿ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದರು.
ನಗರದಲ್ಲಿ ಭಾನುವಾರ 'ಯುವವಾಹಿನಿ' ಬೆಂಗಳೂರು ಘಟಕದ 2024-25ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯುವ ಸಮುದಾಯ ಸಂಘಟಿತರಾದರೆ ಸಮಾಜದಲ್ಲಿ ಬದಲಾವಣೆ ತರಬಹುದು ಎಂಬುದಕ್ಕೆ ಕಳೆದ ಹಲವು ದಶಕಗಳಿಂದ ವಿದ್ಯೆ, ಉದ್ಯೋಗ ಮತ್ತು ಸಂಪರ್ಕದ ಉದ್ದೇಶದಿಂದ ಸೇವೆ ಸಲ್ಲಿಸುತ್ತಿರುವ ಯುವವಾಹಿನಿ ಸಂಘಟನೆಯೇ ಉದಾಹರಣೆ. ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲದೆ, ರಾಜಧಾನಿಯಲ್ಲೂ ಸಮಾಜದ ಯುವ ಮನಸ್ಸುಗಳನ್ನು ಜಾಗೃತಿಗೊಳಿಸಲಾಗುತ್ತಿದೆ’ ಎಂದು ಶ್ಲಾಘಿಸಿದರು.
ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಸಮಾಜಮುಖಿ ಕಾರ್ಯಗಳನ್ನು ಮಾಡಲು ಸಂಘಟನೆ ಅಗತ್ಯ. ಸಮಾಜದ ಧ್ವನಿಯಾಗಿರುವ ಯುವವಾಹಿನಿ ಸಂಘಟನೆಯು ಬೆಂಗಳೂರಿನಲ್ಲಿ ಇನ್ನಷ್ಟು ಗಟ್ಟಿಯಾಗಬೇಕು’ ಎಂದು ಸಲಹೆ ನೀಡಿದರು.
ಕಿರುತೆರೆ ನಿರ್ದೇಶಕ ಸುಭಾಷ್ ಅರುವ ಮಾತನಾಡಿ, ‘ಪ್ರತಿಭೆ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ. ಪ್ರತಿಭೆಯೊಂದಿಗೆ ತ್ಯಾಗ, ಪರಿಶ್ರಮ, ಛಲವಿದ್ದರೆ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ’ ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಹೊಸ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬೆಂಗಳೂರು ಘಟಕದ ಅಧ್ಯಕ್ಷ ಮಿತೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಘಟಕದ ಕಾರ್ಯದರ್ಶಿ ಪ್ರಸಾದ್ ಕುಮಾರ್ ಸಿ.ಪಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀಧರ್ ಡಿ. ಪೂಜಾರಿ, ಉಪಾಧ್ಯಕ್ಷ ಶಶಿಧರ್ ಕೋಟ್ಯಾನ್, ಸಕೇಶ್ ಬುನ್ನನ್, ನಿಯೋಜಿತ ಅಧ್ಯಕ್ಷ ಪ್ರಸಾದ್ ಕುಮಾರ್ ಕಲ್ಲಾಜೆ, ನಿಯೋಜಿತ ಕಾರ್ಯದರ್ಶಿ ಧನುಷ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.