ADVERTISEMENT

ಮಹಿಳಾ ಮೀಸಲಾತಿ ಕಾನೂನು ರೂಪ ಪಡೆಯಲಿ: ಡಾ.ಎಚ್.ಸಿ.ಮಹದೇವಪ್ಪ

ಮಹಿಳಾ ಸಮಾವೇಶದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 16:28 IST
Last Updated 3 ಮಾರ್ಚ್ 2025, 16:28 IST
ಸಚಿವ ಎಚ್.ಸಿ. ಮಹದೇವಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಶ್ವಿನಿ ಕೆ.ಪಿ., ನಯನಾ ಮೋಟಮ್ಮ ಮತ್ತು ರುತ್ ಮನೋರಮಾ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಸಚಿವ ಎಚ್.ಸಿ. ಮಹದೇವಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅಶ್ವಿನಿ ಕೆ.ಪಿ., ನಯನಾ ಮೋಟಮ್ಮ ಮತ್ತು ರುತ್ ಮನೋರಮಾ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಕೀಯ ಪ್ರಾತಿನಿಧ್ಯದಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯು ಕಾನೂನು ರೂಪ ಪಡೆದುಕೊಂಡರೆ ಮಾತ್ರ ರಾಜಕೀಯದಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ದಲಿತ ಮಹಿಳಾ ಫೆಡರೇಷನ್‌  (ಎನ್‌ಎಫ್‌ಡಿಡಬ್ಲ್ಯು) ಮತ್ತು ಮಹಿಳಾ ಧ್ವನಿ ಸೋಮವಾರ ಹಮ್ಮಿಕೊಂಡಿದ್ದ ‘ಅಂಚಿನಲ್ಲಿರುವ ಸಮುದಾಯದ ಮಹಿಳೆಯರ ಮುಂದಿನ ಹಾದಿ’, ‘ಬೀಜಿಂಗ್+30 ಪ್ರತಿಬಿಂಬ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು, ಪರಿಹಾರ ಕಂಡುಕೊಳ್ಳಲು ಸದನಗಳಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಾಗಬೇಕು. ಮಹಿಳಾ ಮೀಸಲಾತಿ ಶೀಘ್ರವೇ ಜಾರಿಗೆ ಬರುವುದೊಂದೇ ದಾರಿ ಎಂದು ಹೇಳಿದರು.

ADVERTISEMENT

ಯಾವ ಹೋರಾಟವೂ ಇಲ್ಲದೇ ಮಹಿಳೆಯರಿಗೆ ಮತದಾನದ ಹಕ್ಕು ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಂದಾಗಿ ಸಿಕ್ಕಿತು. ಸಂವಿಧಾನದವು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಒದಗಿಸಿತು. ಆದರೆ, ಇದು ಮಹಿಳೆಯರಿಗೆ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕಿ ನಯನ ಮೋಟಮ್ಮ ಮಾತನಾಡಿ, ‘ನನ್ನ ತಾಯಿ ಒಬ್ಬ ಅನುಭವಿ ರಾಜಕಾರಣಿಯಾಗಿದ್ದರೂ ನಾನು ವಿಧಾನಸಭೆಗೆ ಬರಲು ಸ್ವಂತ ಪರಿಶ್ರಮವೇ ಕಾರಣ. ನನ್ನನ್ನು ರಾಜಕೀಯಕ್ಕೆ ನನ್ನ ತಾಯಿ ಕರೆದಿಲ್ಲ. ಹಲವು ಸವಾಲುಗಳನ್ನು ಮೆಟ್ಟಿ ನನ್ನದೇ ದಾರಿಯ ಮೂಲಕ ರಾಜಕೀಯ ಬದುಕು ಕಂಡುಕೊಂಡೆ. ಹೆಣ್ಣು ಯಾವುದಕ್ಕೂ ಅಂಜದೆ ಸಮಸ್ಯೆಗಳನ್ನು ಮೆಟ್ಟಿ ನಿಂತು ಮಾದರಿಯಾಗಬೇಕಾದ ಅವಶ್ಯಕತೆ ಇದೆ’ ಎಂದು ಪ್ರತಿಪಾದಿಸಿದರು.

ಈ ಸಮಾವೇಶದಲ್ಲಿ ದೇಶದ ಹಲವು ಭಾಗಗಳಿಂದ ದಲಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಪೌರಕಾರ್ಮಿಕರು ಹಾಗೂ ಮಹಿಳಾ ಸಂಘಟನೆಗಳಿಂದ ಒಟ್ಟು 250ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಶೀಘ್ರವೇ ಈಡೇರಿಸಬೇಕಾದ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿ ಚರ್ಚಿಸಲಾಯಿತು.

ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿ ಕೆ.ಪಿ.ಅಶ್ವಿನಿ, ವುಮೆನ್ಸ್ ವಾಯ್ಸ್ ಪ್ರಧಾನ ಕಾರ್ಯದರ್ಶಿ ರುತ್‌ ಮನೋರಮಾ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಸಾಲಿ, ಪ್ರಮುಖರಾದ ಎಸ್. ಲೀಲಾವತಿ, ಅರ್ಚನಾ ಕ್ಯಾಶ್ಮೀರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.