ADVERTISEMENT

ವೈದ್ಯಕೀಯ ಪಿಜಿ ಕೋರ್ಸ್‌ ಮೀಸಲಾತಿಗಾಗಿ ಎಂಸಿಐಗೆ ಪತ್ರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:15 IST
Last Updated 26 ಮಾರ್ಚ್ 2019, 19:15 IST
   

ಬೆಂಗಳೂರು: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಸೇವಾ ನಿರತ ವೈದ್ಯರಿಗೆ ಮೀಸಲಾತಿ ಕೋರಿ ಭಾರತೀಯ ವೈದ್ಯಕೀಯ ಪರಿಷತ್ತಿಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

‘ನಡು ನೀರಿನಲ್ಲಿ ಗ್ರಾಮೀಣ ವೈದ್ಯರು’ ಎಂಬ ‘ಪ್ರಜಾವಾಣಿ’ ವರದಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕಚೇರಿ, ಈ ಸಂಬಂಧ ವೈದ್ಯಕೀಯ ಶಿಕ್ಷಣ ಪ್ರಧಾನ ಕಾರ್ಯದರ್ಶಿಯವರು ವೈದ್ಯಕೀಯ ಪರಿಷತ್ತಿನ ಜತೆ ಸಂಪರ್ಕದಲ್ಲಿ ಇದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎಂಸಿಐ ಸ್ನಾತಕೋತ್ತರ ರೆಗ್ಯುಲೇಷನ್‌ ಪ್ರಕಾರ, ಸ್ನಾತಕೋತ್ತರ ಪ್ರವೇಶದ ನಿಯಮಾವಳಿಗೆ ತಿದ್ದುಪಡಿ ತಂದು ಗುಡ್ಡಗಾಡು ಪ್ರದೇಶ, ಕಷ್ಟಕರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಸೇವಾ ನಿರತ ವೈದ್ಯರಿಗೆ ಮೂರು ವರ್ಷ ಮೇಲ್ಪಟ್ಟು ಪ್ರತಿ ವರ್ಷದ ಸೇವೆಗೆ ಕನಿಷ್ಟ ಶೇ 10 ಅಂಕಗಳನ್ನು ಗರಿಷ್ಟ ಶೇ 30 ರವರೆಗೆ ಹೆಚ್ಚುವರಿ ಅಂಕಗಳನ್ನು ನೀಟ್‌ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ ಅನುಸಾರವಾಗಿ ಸೇರಿಸಲು ತೀರ್ಮಾನಿಸಲಾಗಿದೆ.

ADVERTISEMENT

ಸೇವಾ ನಿರತ ವೈದ್ಯರಿಗೆ ಶೇ 50 ರಷ್ಟು ಡಿಪ್ಲೋಮೊ ಸೀಟುಗಳನ್ನು ಮೀಸಲಿಡಲಾಗಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಜಾರಿಯಲ್ಲಿರುವ ಎಂಸಿಐ ನಿಯಮಾವಳಿಗಳ ಅನ್ವಯವೇ ಪ್ರವೇಶ ನೀಡುತ್ತಿದ್ದು, ಇಲ್ಲೂ ಅದೇ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.