ಬೆಂಗಳೂರು: ಮಣಿಪುರದಲ್ಲಿ ಹಿಂಸಾಚಾರ ಕೊನೆಗಾಣಿಸಬೇಕು. ಶಾಂತಿ, ಸೌಹಾರ್ದವನ್ನು ಮರುಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ.
ಮಣಿಪುರದಲ್ಲಿ ಮೂರು ತಿಂಗಳಲ್ಲಿ 200ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದು, 800ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 70,000ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಹಿಂಸಾಚಾರ ಮುಂದುವರಿದಿದೆ. ಇದನ್ನು ನಿಯಂತ್ರಿಸಲು ಭಾರತ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮಣಿಪುರದಲ್ಲಿ ಮಾತ್ರವಲ್ಲ ದೇಶದ ವಿವಿಧೆಡೆ ಸಾಮಾಜಿಕ ಅಸ್ಥಿರತೆ, ಅಶಾಂತಿ, ಅಭದ್ರತೆ ಸೃಷ್ಟಿಯಾಗಿದೆ. ವಿಶ್ವಾಸ, ಸಹೋದರ ಭಾವನೆ, ನಾಗರಿಕತೆ, ಪರಸ್ಪರ ನಂಬಿಕೆ ಕಳೆದು ಹೋಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕು. ಸಾಧ್ಯವಾದರೆ ರಾಷ್ಟ್ರಪತಿ ಆಡಳಿತ ಹೇರಬೇಕು. ಕೋಮುವಾದಿ ಗೂಂಡಾಗಳ, ಕೊಲೆಗಡುಕರ ವಿರುದ್ಧ ಕ್ರಮಕೈಗೊಳ್ಳಬೇಕು. ಮಹಿಳೆಯರು, ಮಕ್ಕಳಿಗೆ ಆಶ್ರಯ, ರಕ್ಷಣೆ ನೀಡಬೇಕು ಎಂದು ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಕೌತಾಳ್, ಬರಹಗಾರ ಶಿವಸುಂದರ್, ಎನ್.ವೆಂಕಟೇಶ್ ಪತ್ರ ಬರೆದಿದ್ದಾರೆ. ಪ್ರತಿಯನ್ನು ಪ್ರಧಾನಿ, ಕೇಂದ್ರ ಗೃಹ ಸಚಿವರು, ಬುಡಕಟ್ಟು ಕಲ್ಯಾಣ ಸಚಿವರಿಗೂ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.