ADVERTISEMENT

ಪಂಚಾಯತ್‌ ಇಲಾಖೆಯ ವ್ಯಾಪ್ತಿಗೆ 5766 ಗ್ರಂಥಾಲಯ

ಪುಸ್ತಕೋದ್ಯಮದಲ್ಲಿ ಗೊಂದಲ: ಮಾ. 1ರಿಂದ ಹೊಸ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 20:04 IST
Last Updated 6 ಮಾರ್ಚ್ 2019, 20:04 IST
   

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿರುವ ರಾಜ್ಯದ 5,766 ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ (ಆರ್‌ಡಿಪಿಆರ್‌) ಇಲಾಖೆ ವಶಕ್ಕೆ ನೀಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸರ್ಕಾರದ ಈ ಕ್ರಮದಿಂದ ಗ್ರಂಥಾಲಯ ಇಲಾಖೆ ತನ್ನ ಬಹುತೇಕ ಅಧಿಕಾರ ಕಳೆದುಕೊಂಡಿದೆ.

ಇಲಾಖೆಯ ಹಿತಾಸಕ್ತಿ ಕಾಪಾಡುವಲ್ಲಿ ಹಿರಿಯ ಅಧಿಕಾರಿಗಳು ಮತ್ತು ನಿರ್ದೇಶಕರು ಆಸಕ್ತಿ ವಹಿಸಿಲ್ಲ ಎಂಬ ಆಕ್ರೋಶ ಗ್ರಂಥಾಲಯ ಇಲಾಖೆಯಲ್ಲಿ ವ್ಯಕ್ತವಾಗಿದ್ದರೆ, ಈ ಬೆಳವಣಿಗೆಯ ಪರಿಣಾಮಗಳ ಬಗ್ಗೆ ಪುಸ್ತಕೋದ್ಯಮ ಮತ್ತು ಪ್ರಕಾಶಕ ವಲಯದಲ್ಲಿ ಆತಂಕ ಉಂಟಾಗಿದೆ.

ADVERTISEMENT

ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಚ್‌ 1ರಂದು ಅಧಿಸೂಚನೆ ಹೊರಡಿಸಿದೆ.

ಆರ್‌ಡಿಪಿಆರ್‌ ತನ್ನ ಸುಪರ್ದಿಗೆ ಬಂದ ಗ್ರಂಥಾಲಯಗಳಿಗೆ ಸಂಬಂಧಿಸಿದ ಕೆಲವು ಜವಾಬ್ದಾರಿಗಳನ್ನು ಶಿಕ್ಷಣ ಇಲಾಖೆಗೆ ವಹಿಸಲಿದೆ. ಅವುಗಳೆಂದರೆ, ಗ್ರಂಥಾಲಯಗಳ ನಿರ್ವಹಣೆ, ಮೇಲ್ವಿಚಾರಕರ ವೇತನ, ಪುಸ್ತಕಗಳ ಖರೀದಿಗೆ ವಾರ್ಷಿಕವಾಗಿ ನೀಡುವ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ.

ಆದರೆ, ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಅಧಿಕಾರವನ್ನು ಮಾತ್ರ ಗ್ರಾಮ ಪಂಚಾಯಿತಿಗಳಿಗೇ ನೀಡಲಾಗಿದೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ನಿರ್ವಹಣಾ ಅನುದಾನವನ್ನು ತಕ್ಷಣವೇ ಗ್ರಾಮ ಪಂಚಾಯಿತಿಗಳಿಗೇ ವರ್ಗಾಯಿಸಬೇಕು,ಗ್ರಂಥಾಲಯ ಸೆಸ್‌ ಗ್ರಾಮಪಂಚಾಯಿತಿ ಗ್ರಂಥಾಲಯಗಳಿಗೇ ಬಳಸಬೇಕು ಎಂದೂ ಅಧಿಸೂಚನೆ ತಿಳಿಸಿದೆ.

ವ್ಯಾಪ್ತಿ, ಅಧಿಕಾರಕ್ಕೆ ಕತ್ತರಿ: ಸರ್ಕಾರದ ನಿರ್ಧಾರದಿಂದ ಗ್ರಂಥಾಲಯ ಇಲಾಖೆ ಅಧಿಕಾರಕ್ಕೆ ಕತ್ತರಿ ಬಿದ್ದಿದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಸಿಬ್ಬಂದಿ ಇನ್ನು ಮುಂದೆ ಆರ್‌ಡಿಪಿಆರ್‌ ವ್ಯಾಪ್ತಿಗೆ ಒಳಪಡಲಿದ್ದಾರೆ. ಇದರಿಂದ ಗ್ರಂಥಾಲಯ ಇಲಾಖೆಯಲ್ಲಿ ಉಳಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಖ್ಯೆ ಸುಮಾರು 1,000 ಎಂದು ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.