ADVERTISEMENT

ಕೆಟ್ಟಿದ್ದ ಲಿಫ್ಟ್‌ನೊಳಗೆ ಹೋಗಿ ದುರ್ಮರಣ!

ಹೊಲಿಗೆ ಯಂತ್ರ ಖರೀದಿಗೆ ಬಂದಿದ್ದ ಅಜಯ್ ಸಾವು

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:58 IST
Last Updated 22 ಮೇ 2019, 19:58 IST
ಲಿಫ್ಟ್‌ ಬಾಗಿಲು ಒಡೆದಿರುವುದು
ಲಿಫ್ಟ್‌ ಬಾಗಿಲು ಒಡೆದಿರುವುದು   

ಬೆಂಗಳೂರು: ಕಾಮಾಕ್ಷಿಪಾಳ್ಯದ ‘ಸ್ಪಾರ್ಕಲ್ ಫ್ಯಾಷನ್ಸ್‌’ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಲಿಫ್ಟ್ ಕುಸಿದು ಅಜಯ್ ಕಟಾವಕರ್ (47) ಎಂಬುವರು ಮೃತಪಟ್ಟಿದ್ದಾರೆ.

ಹೊಲಿಗೆ ಯಂತ್ರಗಳ ಮಾರಾಟಗಾರರಾದ ಅವರು, ಮಹಾಲಕ್ಷ್ಮಿಲೇಔಟ್‌ನ ಶಂಕರನಗರ ಮುಖ್ಯರಸ್ತೆಯಲ್ಲಿ ‘ಸಿಂಪನಿ ಎಂಟರ್‌ಪ್ರೈಸಸ್’ ಅಂಗಡಿ ಇಟ್ಟುಕೊಂಡಿದ್ದರು. ಸೆಕೆಂಡ್ ಹ್ಯಾಂಡ್ ಯಂತ್ರಗಳ ಖರೀದಿಗೆಂದುಸೋಮವಾರ ಸಂಜೆ ಕಾರ್ಖಾನೆಗೆ ಹೋಗಿದ್ದಾಗ ದುರಂತ ಸಂಭವಿಸಿದೆ.

ಕೆಟ್ಟಿದ್ದ ಲಿಫ್ಟ್: ಅಜಯ್ ಅವರು ಗೋಪಾಲಕೃಷ್ಣನ್ ಎಂಬ ಮಧ್ಯವರ್ತಿಯ ಮೂಲಕ ಆ ಕಾರ್ಖಾನೆಯಲ್ಲಿ ಯಂತ್ರಗಳ ಖರೀದಿಗೆ ಮುಂದಾಗಿದ್ದರು. ಮೇ 18ರಂದೇ ಸಿಂಡಿಕೇಟ್ ಬ್ಯಾಂಕ್‌ನ ಸುಲ್ತಾನ್‌ ಪಾಳ್ಯ ಶಾಖೆಯಿಂದ ಕಾರ್ಖಾನೆ ಮಾಲೀಕರ ಖಾತೆಗೆ ₹ 1.70 ಲಕ್ಷ ಜಮೆ ಮಾಡಿದ್ದ ಅವರು, ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಫೈಸಲ್ ಹಾಗೂ ಮಸ್ತಾನ್ ಎಂಬ ಹುಡುಗರನ್ನು ಕರೆದುಕೊಂಡು ಯಂತ್ರಗಳನ್ನು ತರಲು ಸೋಮವಾರ ಕಾರ್ಖಾನೆಗೆ ತೆರಳಿದ್ದರು.

ADVERTISEMENT

‘ನಾನು, ಮಸ್ತಾನ್ ಹಾಗೂ ಫೈಸಲ್ 3ನೇ ಮಹಡಿ ಗೋದಾಮಿನಲ್ಲಿದ್ದ ಯಂತ್ರಗಳನ್ನು ತೆಗೆದುಕೊಂಡು ಹೊರಗೆ ಬಂದೆವು. ಈ ವೇಳೆ ಅಜಯ್ ಲಿಫ್ಟ್ ಬಟನ್ ಒತ್ತಿ ಒಳಗೆ ಹೋದರು. ನಾವು ಹೋಗುವಷ್ಟರಲ್ಲಿ ಅದು ಹಠಾತ್ತನೇ ಕುಸಿಯಿತು. ಗಾಬರಿಯಿಂದ ತಕ್ಷಣ ಎಲ್ಲರೂ 2ನೇ ಮಹಡಿಗೆ ತೆರಳಿ, ಬಲವಂತವಾಗಿ ಬಾಗಿಲು ತೆರೆದಾಗ ಅವರ ಮುಖ ಪೂರ್ತಿ ರಕ್ತಸಿಕ್ತವಾಗಿತ್ತು. ಹೊರಗೆ ಎಳೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೆ ಐದು ಅಡಿಯಷ್ಟು ಕೆಳಗೆ ಹೋಯಿತು’ ಎಂದು ಪ್ರತ್ಯಕ್ಷದರ್ಶಿ ಗೋಪಾಲಕೃಷ್ಣನ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಮೊದಲ ಹಾಗೂ ಎರಡನೇ ಮಹಡಿಯ ನಡುವಿನಲ್ಲಿ ಲಿಫ್ಟ್ ಸ್ಥಗಿತಗೊಂಡಿತ್ತು. ನಂತರ ತಂತ್ರಜ್ಞರ ನೆರವಿನಿಂದ ಅದನ್ನು ಮೊದಲ ಮಹಡಿಗೆ ಇಳಿಸಿ ಬಾಗಿಲು ತೆರೆಸಿದಾಗ ಅಜಯ್ ಪ್ರಜ್ಞೆ ತಪ್ಪಿಬಿದ್ದಿದ್ದರು. ತಕ್ಷಣ ಸಮೀಪದ ಲಕ್ಷ್ಮಿ ಆಸ್ಪತ್ರೆಗೆ ಕರೆದೊಯ್ದೆವು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 7.40ಕ್ಕೆ ಕೊನೆಯುಸಿರೆಳೆದರು’ ಎಂದೂ ಅವರು ವಿವರಿಸಿದ್ದಾರೆ.

‘ದುರಸ್ತಿ ಫಲಕವೂ ಇರಲಿಲ್ಲ’

‘ತುಂಬ ದಿನಗಳ ಹಿಂದೆಯೇ ಆ ಲಿಫ್ಟ್ ಕೆಟ್ಟು ಹೋಗಿತ್ತಂತೆ. ಹಣ ಖರ್ಚಾಗುತ್ತದೆಂದು ಮಾಲೀಕರು ದುರಸ್ತಿ ಮಾಡಿಸುವ ಗೋಜಿಗೆ ಹೋಗಿಲ್ಲ. ಕನಿಷ್ಠ ‘ಲಿಫ್ಟ್ ದುರಸ್ತಿಯಲ್ಲಿದೆ’ ಎಂಬ ಫಲಕವನ್ನಾದರೂ ಹಾಕಿದ್ದರೆ, ನನ್ನ ಗಂಡ ಅದರಲ್ಲಿ ಹೋಗುತ್ತಿರಲಿಲ್ಲ. ಹೀಗಾಗಿ, ಸಾವಿಗೆ ಮಾಲೀಕರ ನಿರ್ಲಕ್ಷ್ಯವೇ ಕಾರಣ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಮೃತರ ಪತ್ನಿ ಸುನಿತಾ ದೂರು ಕೊಟ್ಟಿದ್ದಾರೆ.

ಅದರನ್ವಯ ನಿರ್ಲಕ್ಷ್ಯ (ಐಪಿಸಿ 304ಎ) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯರು ಅಸ್ವಸ್ಥಗೊಂಡಿದ್ದ ಪ್ರಕರಣ

ವಿದ್ಯಾರಣ್ಯಪುರ ಮುಖ್ಯರಸ್ತೆಯ ಕಟ್ಟಡವೊಂದರಲ್ಲಿ ಸೋಮವಾರ (ಮೇ 21) ಸಂಜೆ ತಾಂತ್ರಿಕ ದೋಷದಿಂದ ಲಿಫ್ಟ್ ಸ್ಥಗಿತಗೊಂಡು ವೆಲ್ಲಿಯಮ್ಮ ಹಾಗೂ ಪಾರ್ವತಮ್ಮ ಎಂಬುವರು ಅಸ್ವಸ್ಥಗೊಂಡಿದ್ದರು.

ಕಟ್ಟಡದ 5ನೇ ಮಹಡಿಯಲ್ಲಿರುವ ಸಲೂನ್‌ಗೆ ತೆರಳಲು ಸಂಜೆ 4 ಗಂಟೆ ಸುಮಾರಿಗೆ ಅವರು ಲಿಫ್ಟ್‌‌ನೊಳಗೆ ಹೋಗಿದ್ದರು. ಸ್ವಲ್ಪ ಮೇಲೆ ಹೋಗುತ್ತಿದ್ದಂತೆಯೇ ಅದು ನಿಂತುಕೊಂಡಿತು. ಅವರ ಚೀರಾಟ ಕೇಳಿ ಜ್ಯೋತಿ ಎಂಬುವರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ, 6 ಗಂಟೆ ಸುಮಾರಿಗೆ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದ್ದ ಇಬ್ಬರೂ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡರು.

ಹಿಂದಿನ ಲಿಫ್ಟ್ ಅವಘಡಗಳು

2017, ಜ.15: ಮಾಗಡಿ ರಸ್ತೆಯ ಜಿ.ಟಿ.ವರ್ಲ್ಡ್‌ ಮಾಲ್‌ನ ಲಿಫ್ಟ್‌ನಲ್ಲಿ ಸಿಲುಕಿ ಸ್ವಚ್ಛತಾ ಕೆಲಸಗಾರ ಶ್ರೀನಿವಾಸ್ ಮೃತಪಟ್ಟಿದ್ದರು.

2018, ನ.12: ಫ್ರೇಜರ್‌ ಟೌನ್‌ನ ಸಿಲ್ವರ್ ನೆಸ್ಟ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಲಿಫ್ಟ್ ಕುಸಿದು ತನುಶ್ರೀ, ಅಕ್ಷರಾ ಹಾಗೂ ಇಷಿಕಾ ಎಂಬ ಕಾನೂನು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು.

2018, ನ.3: ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ‘ತನೇರಿಯಾ’ ಸೀರೆ ಮಾರಾಟ ಮಳಿಗೆಯ ಲಿಫ್ಟ್‌ನಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹಾಗೂ ಅವರ ಪತ್ನಿ ಸಿಲುಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.