
ಸಚಿವ ಎಂ.ಬಿ. ಪಾಟೀಲ
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿರುವ ಲಿಂಗಾಯತ ಶಾಸಕರ ಸಭೆ ನಾಲ್ಕು ದಿನಗಳ ಹಿಂದೆ ನಡೆದಿದ್ದು, ಇದು ಶಕ್ತಿ ಪ್ರದರ್ಶನ ಅಲ್ಲ. ಅಶೋಕ ಪಟ್ಟಣ ಮತ್ತು ಬಿ.ಆರ್. ಪಾಟೀಲ ಈ ಸಭೆ ಕರೆದಿದ್ದರು. ಸಮುದಾಯದ ಹಿತಾಸಕ್ತಿ ಕುರಿತು ಅಲ್ಲಿ ಚರ್ಚೆ ನಡೆಯಿತು ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು,
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಆಗಿಂದಾಗ್ಗೆ ಸಭೆ ಸೇರುತ್ತಲೇ ಇರುತ್ತೇವೆ. ಬೇರೆ ಬೇರೆ ಸಮುದಾಯಗಳ ಶಾಸಕರೂ ಸಭೆ ಮಾಡುತ್ತಾರೆ. ಆದರೆ, ನಮ್ಮ ಸಭೆಯನ್ನು ಮಾತ್ರ ಲಿಂಗಾಯತರ ಶಕ್ತಿ ಪ್ರದರ್ಶನ ಎಂದು ಬಿಂಬಿಸುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.
‘1989ರಲ್ಲಿ ಲಿಂಗಾಯತರ ಬೆಂಬಲದಿಂದ ಕಾಂಗ್ರೆಸ್ 178 ಕಡೆ ಗೆದ್ದು, ಐತಿಹಾಸಿಕ ಸಾಧನೆ ಮಾಡಿತ್ತು. ಈಗಲೂ ಕಾಂಗ್ರೆಸ್‌ನಲ್ಲಿ 34 ಲಿಂಗಾಯತ ಶಾಸಕರಿದ್ದೇವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯ ಕಾಂಗ್ರೆಸ್‌ಗೆ ವೋಟ್ ಹಾಕಿದೆ. ಹೀಗಾಗಿ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಬೇಕು ಎನ್ನುವುದರಲ್ಲಿ ತಪ್ಪೇನಿಲ್ಲ. ಆದರೆ, ನಾವು ಇನ್ನೊಂದು ಸಮುದಾಯದ ಪಾಲನ್ನು ಕಿತ್ತುಕೊಳ್ಳುವುದಿಲ್ಲ’ ಎಂದು ಹೇಳಿದರು.
ನರೇಗಾ ಪುನಃ ಬರಲಿ
‘ಹಿಂದೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆಯನ್ನು ಬಿಜೆಪಿ ನಾಯಕರಾದ ಅಡ್ವಾಣಿ, ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್ ಅವರೇ ಹೊಗಳಿದ್ದರು. ಈಗ ಮೋದಿ ಸರ್ಕಾರ ಇದನ್ನು ಹಾಳು ಮಾಡಿದ್ದು, ಯೋಜನೆಯ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಿಸಿದೆ. ಬಿಜೆಪಿ ಸಂಸದರೇ ಈ ಬಗ್ಗೆ ದನಿ ಎತ್ತಿ, ಗೌರವ ಉಳಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.